ನಮೋ ರಾಗದ ಹಿಂದೆ ಕಾರ್ಪೋರೇಟ್ ಅಭಿವೃದ್ಧಿಯಿದೆ
ಹಾಸನ: ಓಟಿಗಾಗಿ ರಾಜಕೀಯ ನೇತಾರರು ನಮೋ ರಾಗ ಹಾಡುತ್ತಿದ್ದಾರೆ. ಈ ರಾಗದ ಹಿಂದೆ ಕಾರ್ಪೋರೇಟ್ ಮಾರ್ಗದ ಅಭಿವೃದ್ಧಿ ಮಂತ್ರಗಳನ್ನು ಪಠಿಸುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಟೀಕಿಸಿದ್ದಾರೆ.
ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದ ಸಾವಿತ್ರಿಬಾಯಿ ಫುಲೆ ಸಭಾಂಗಣದ ದಾಕ್ಷಾಯಣಿ ವೇದಿಕೆಯಲ್ಲಿ ಸಮತಾ- ಬಿಜಿವಿಎಸ್ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಓಟಿಗಾಗಿ ನಾನಾ ಮರುಳು ಮಾಡಲು ಮುಂದಾಗಿರುವ ಯಾವುದೇ ರಾಜಕೀಯ ಪಕ್ಷಗಳು ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಬಿಲ್ಲಿನ ಕುರಿತು ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಲೆ ಏರಿಕೆ: ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರದಲ್ಲಿ ಇದ್ದಾಗ 35 ಬಾರಿ ಬೆಲೆ ಏರಿಕೆ ಮಾಡಿದೆ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ 46 ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಟೀಕಿಸಿದರು.
ಪ್ರಶ್ನೆ ಕೇಳಬೇಕು: 2.44 ಲಕ್ಷ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಕಳೆ 3 ವರ್ಷಗಳಲ್ಲಿ ದಾಖಲಾಗಿದೆ. ಅದರಲ್ಲಿ 47 ಸಾವಿರ ಕರ್ನಾಟಕದಲ್ಲಿ ಆಗಿದೆ. 2708 ಅತ್ಯಾಚಾರ, 26000 ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ 45 ಸಾವಿರ ಹೆಣ್ಣುಮಕ್ಕಳು ವಾರ್ಷಿಕ ಸರಾಸರಿ ಕಾಣೆಯಾಗುತ್ತಿದ್ದಾರೆ. ಈ ಕುರಿತು ಯಾವ ಪಕ್ಷಗಳೂ ಕೂಡ ದನಿಯೆತ್ತುತ್ತಿಲ್ಲ. ಮಹಿಳೆಯರು ಈ ಬಗ್ಗೆ ಪ್ರಶ್ನೆ ಕೇಳಬೇಕಾಗಿದೆ ಎಂದರು.
ಪುರುಷ ಪ್ರಾಧಾನ್ಯತೆ: ಸಮತ ಜಿಲ್ಲಾ ಸಂಚಾಲಕಿ ಮಮತಾ ಮಾತನಾಡಿ, ಯಾವುದೇ ದೇಶದ ಅಭಿವೃದ್ಧಿಯಲ್ಲಿ ಮಹಿಳೆ ಮತ್ತು ಪುರುಷರು ಸಮಾನ ಹಕ್ಕುದಾರರಾಗಿದ್ದಾರೆ. ಆದರೆ, ನಿರ್ಧಾರಕ ಅಂಶಗಳಲ್ಲಿ ಮಹಿಳೆಯನ್ನು ದೂರವಿರಿಸಿ ಪುರುಷರೇ ಮೇಲುಗೈ ಸಾಧಿಸುವ ಸಾಂಸ್ಕೃತಿಕ ಚೌಕಟ್ಟಿನಿಂದಾಗಿ, ಮದುವೆ, ಆಸ್ತಿ- ಹಕ್ಕು, ಮನೆತನದ ಹೆಸರುಗಳು, ಶಾಲಾ ದಾಖಲಾತಿಯಲ್ಲಿ ಪುರುಷ ಪ್ರಾಧಾನ್ಯತೆಯೇ ಕಾನೂನಾಗಿದೆ ಎಂದರು.
ಅಡ್ಡಗೋಡೆ: ಮುಖ್ಯ ಅತಿಥಿಯಾಗಿ ಮಾತನಾಡಿದ ವಿಜಿಯ ಶಾಲೆಯ ಆಡಳಿತಾಧಿಕಾರಿ ತಾರಾಸ್ವಾಮಿ, ಮಾನವ ಸಮಾಜ ಮಹಿಳೆಯರನ್ನು ಪ್ರಮುಖ ವಿಷಯಗಳಿಂದ ದೂರವಿರಿಸಿರುವುದು ಮಾನವ ಸಮಾಜದ ಅಭ್ಯುದಯಕ್ಕೆ ಅಡ್ಡಗೋಡೆ ಎಂದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆಯ ಮಹಿಳೆಯರು ಇದ್ದರು. ಸಮತ ಸದಸ್ಯೆ ರೇಖಾ ಮೊದಲಿಗೆ ಸ್ವಾಗತಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ನಳಿನಾ ವಂದನೆಗಳನ್ನು ಸಲ್ಲಿಸಿದರು. ರೇ ಮತ್ತು ಗೀತ ಜಾಗೃತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.