ಮಂಜು ಬೆಂಬಲಕ್ಕೆ ದಲಿತ ಸಂಘಟನೆಗಳು
ಅರಕಲಗೂಡು: ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ದಲಿತ ಸಂಘಟನೆಗಳ ವೇದಿಕೆ ಅಡಿಯಲ್ಲಿ ನಡೆದ ಸಭೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರನ್ನು ಬೆಂಬಲಿಸುವಂತೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳು ಅಧಿಕಾರಕ್ಕೆ ಬರದಂತೆ ತಡೆಯಬೇಕು. ಹಾಸನ ಜಿಲ್ಲೆಯಲ್ಲಿ ಸರ್ವಾಧಿಕಾರತ್ವ ಹೊಂದಿರುವ, ದಲಿತ ವಿರೋಧಿ ದೇವೇಗೌಡರನ್ನು ಸೋಲಿಸಿ, ಜನಸಾಮಾನ್ಯರ ಹಿತ ಕಾಯುವ ಹಾಗೂ ಜಾತ್ಯಾತೀತ ಭಾವನೆ ಹೊಂದಿರುವ ಎ. ಮಂಜು ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ದಸಂಸ ಮುಖಂಡ ಗಣೇಶ್ ವೇಲಾಪುರಿ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ವಿಜಯ್ಕುಮಾರ್ ದಲಿತ ಸಂಘಟನೆಗಳ ಸಂಯುಕ್ತ ವೇದಿಕೆಯ ಅಧ್ಯಕ್ಷ ಮೋಕಲಿ ಪುಟ್ಟರಾಜು, ಉಪಾಧ್ಯಕ್ಷ ಮಗ್ಗೆ ಸಣ್ಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಬೊಮ್ಮಯ್ಯ, ಕಾರ್ಯದರ್ಶಿ ಚಂದ್ರು, ಸಹಕಾರ್ಯದರ್ಶಿ ವೀರಾಜ್, ಪ್ರದೀಪ್ಕುಮಾರ್, ಡಿ.ಸ್ವಾಮಿ, ದೊರೆಬಾಬು, ಕೇಶವ, ಮೋಕಲಿ ಕಾಂತರಾಜು, ಶಂಕರ್, ಹೊನ್ನವಳ್ಳಿ ರಮೇಶ್ ಇತರರು ಉಪಸ್ಥಿತರಿದ್ದರು.