ವಿವಾದಕ್ಕೆ ಕಾರಣವಾಯ್ತು ಉಸ್ತುವಾರಿ ಸಚಿವರ ಗೈರು
ಕನ್ನಡಪ್ರಭ ವಾರ್ತೆ ಹಾಸನ ಮಾ. 30
ನಗರದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಲ್ಲದೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಕೂಡ, ಪಕ್ಷದ ರಾಜ್ಯ ಮುಖಂಡರು ನಡೆಸಿಕೊಂಡ ಬಗ್ಗೆ ತೀವ್ರ ಅಸಮಾಧಾನವನ್ನು ವೇದಿಕೆಯಲ್ಲೇ ಹೊರಹಾಕಿದರು.
ಉಸ್ತುವಾರಿ ಸಚಿವ ಮಹಾದೇವಪ್ಪರಿಗೆ ಜಿಲ್ಲಾಚುನಾವಣೆ ಉಸ್ತುವಾರಿ ನೀಡದೇ ಇರುವ ಬಗ್ಗೆಯೂ ಪಕ್ಷದ ಒಳಗೊಳಗೆ ತೀವ್ರ ಅಸಮಾಧಾನ ಹೊಗೆ ಎದ್ದಿದ್ದು, ಇದರಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಮಾನ್ಯವಾಗಿ ಜಿಲ್ಲೆಯ ಉಸ್ತುವಾರಿಯನ್ನು ಹೊತ್ತವರಿಗೆ ಚುನಾವಣಾ ನಿರ್ವಹಣೆ ಮಾಡುವ ಉಸ್ತುವಾರಿ ನೀಡಲಾಗುತ್ತದೆ. ಇದ್ದದ್ದರಲ್ಲಿ ಮಹಾದೇವಪ್ಪನವರು ಎಲ್ಲರನ್ನೂ ಸಮಾನವಾಗಿ ಕಂಡು ಜಿಲ್ಲೆಯ ಅಭಿವೃದ್ಧಿಯ ವಿಚಾರಗಳ ಬಗ್ಗೆ ಗಮನಹರಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೂ, ಅವರಿಗೆ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ನೀಡಿಲ್ಲದಿರುವುದ ಅಚ್ಚರಿ ತಂದಿದೆ.
ಒಳ ವಿಷಯವೇನು?: ಇತ್ತೀಚೆಗೆ ಹಾಸನ ಹಾಲು ಒಕ್ಕೂಟದ ಸಮಾರಂಭದಲ್ಲಿ ಭಾಗವಹಿಸಿದ್ದ ಎಚ್.ಸಿ. ಮಹದೇವಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಹೊಗಳಿದ್ದು ಪಕ್ಷದ ಮುಖಂಡರನ್ನು ಕೆರಳಿಸಿತ್ತು ಎಂದು ಪಕ್ಷದ ರಾಜ್ಯಮಟ್ಟದ ಮುಖಂಡರು ಹೇಳಿದರು. ತದನಂತರದಲ್ಲಿ ದಲಿತ ಮುಖಂಡರೂ ಆದ ಸಚಿವ ಮಹಾದೇವಪ್ಪನವರಿಗೆ ಚುನಾವಣೆ ಉಸ್ತುವಾರಿ ನೀಡುವುದನ್ನು ನಿರಾಕರಿಸಲಾಯಿತು ಎನ್ನಲಾಗುತ್ತಿದೆ.
ಇದರಿಂದ ಮುನಿಸಿಕೊಂಡಿರುವ ಮಹಾದೇವಪ್ಪ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಭಾಗವಹಿಸಿದ್ದ ಕಾರ್ಯಕರ್ತರ ಸಭೆಗೆ ಬರಲಿಲ್ಲ ಎಂದು ಹೇಳಲಾಗಿದೆ. ಇದನ್ನು ಒಪ್ಪದ ಕೆಲ ಕಾಂಗ್ರೆಸ್ ಮುಖಂಡರು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು, ದೇವೇಗೌಡರನ್ನು ಸೋಲಿಸಿದ ಅನುಭವ ಇರುವ ಕಾರಣಕ್ಕೆ ಅವರಿಗೆ ಚುನಾವಣಾ ಉಸ್ತುವಾರಿ ನೀಡಲಾಗಿದೆ ಎಂದು ಕಾಂಗ್ರೆಸ್ನ ರಮೇಶ್ ಸಮರ್ಥಿಸಿಕೊಳ್ಳುತ್ತಾರೆ.
ದಲಿತರಿಗೆ ಅವಮಾನ: ಮಹಾದೇವಪ್ಪನವರಿಗೆ ಚುನಾವಣಾ ಉಸ್ತುವಾರಿ ನೀಡುವ ಮೂಲಕ ದಲಿತ ಮಂತ್ರಿಗೆ ಅವಮಾನ ಮಾಡಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಆದರೆ, ಇದಕ್ಕೆ ಸಮಜಾಯಿಷಿ ನೀಡುವ ಜಿಲ್ಲೆಯ ದಲಿತ ಮುಖಂಡ ಎಚ್.ಕೆ. ಸಂದೇಶ್, ಮಹಾದೇವಪ್ಪನವರು ಹೋರಾಟಗಾರ, ಅವರಿಗೆ ಕಾಂಗ್ರೆಸ್ ಪಕ್ಷ ಜಿಲ್ಲಾ ಚುನಾವಣಾ ಉಸ್ತುವಾರಿ ನೀಡಿಲ್ಲ. ನಿಜ. ಆದರೆ, ಅದು ಅವಮಾನ ಅಲ್ಲ. ರಾಜಕಾರಣದಲ್ಲಿ ಅವೆಲ್ಲಾ ಅನಿವಾರ್ಯ. ಕೊರಟೆಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಸೋಲಿನ ಹಿಂದೆ ಯಾರ ಕೈವಾಡ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.