ಅಕ್ರಮ ಮರಳು ಸಾಗಣೆ ತಡೆದ ತಾ.ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ
ಬೇಲೂರು: ಅಕ್ರಮ ಮರಳು ದಾಸ್ತಾನು ಮಾಡಿದ್ದನ್ನು ತಾಲೂಕು ಆಡಳಿತ ವಶಪಡಿಸಿಕೊಂಡಿದ್ದ ದ್ವೇಷದ ಹಿನ್ನಲೆಯಲ್ಲಿ ತಾಲೂಕು ಕಚೇರಿ ಸಿಬಂದಿ ಮೇಲೆ ಹಲ್ಲೆ ನೆಡೆದಿದೆ.
ತಾಲೂಕಿನ ಅರೇಹಳ್ಳಿ ಹೋಬಳಿ ಬಾಸೂರು ಗ್ರಾಮದಲ್ಲಿ 30 ಲೋಡ್ ಅಕ್ರಮ ಮರಳನ್ನು ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕ ಸೇರಿದಂತೆ ಇನ್ನು ಉಳಿದ ಕಂದಾಯ ಅಧಿಕಾರಿಗಳು ಅಕ್ರಮ ಮರಳನ್ನು ವಶ ಪಡಿಸಿಕೊಳ್ಳವ ಸಂದರ್ಭದಲ್ಲಿ ಗ್ರಾಮ ಸಹಾಯಕ ರಾಜೇಶ್ ಎಂಬವರ ಮೇಲೆ ನಿಂಗರಾಜು, ಸುರೇಶ್ ಎಂಬವರು ತೀವ್ರ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಹಲ್ಲೆಗೊಳಗಾದ ರಾಜೇಶ್ ಮಾತನಾಡಿ, ಸೋಮವಾರ ಬಾಸೂರು ಗ್ರಾಮದಲ್ಲಿ ಮಂಜುನಾಥ್ ಎಂಬವರಿಗೆ ಸಂಬಂಧ ಪಟ್ಟ 30 ಲೋಡ್ ಅಕ್ರಮ ಮರಳುನ್ನು ವಶ ಮಾಡಿಕೊಳ್ಳಲಾಗಿತ್ತು. ಈ ಅಕ್ರಮ ಮರಳು ದಾಸ್ತಾನು ನಿಂಗರಾಜು ಮತ್ತು ಸುರೇಶ ಎಂಬರಿಗೆ ಸೇರಿದ್ದು ಕಂದಾಯ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದರು. ಸ್ಥಳೀಯ ಗ್ರಾಮ ಸಹಾಯಕನಾದ ರಾಜೇಶನೇ ಮರಳು ವಶಪಡಿಸಿಕೊಳ್ಳಲು ಕಾರಣ ಎಂದು ಭಾವಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದರು.
ಬೇಲೂರು ಆಸ್ಪತ್ರೆಗೆ ಭೇಟಿ ನೀಡಿದ ತಹಸೀಲ್ದಾರ್ ಚೌಡಯ್ಯ ಗಾಯಾಳುಗಳನ್ನು ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಬ್ಬಂದಿ ಮೇಲೆ ತೀವ್ರ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಮರಳು ದಂಧೆ ತಡೆಗಟ್ಟುವಲ್ಲಿ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದರು.