'ಮಕ್ಕಳು ಹಣದ ಯಂತ್ರಗಳಲ್ಲ'
ಸಕಲೇಶಪುರ: ಪೋಷಕರು ತಮ್ಮ ಮಕ್ಕಳನ್ನು ಹಣಗಳಿಸುವ ಯಂತ್ರವಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು ಎಂದು ತೆಂಕಲಗೋಡು ಬೃಹನ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಕಲೇಶಪುರ ತಾಲೂಕು ಬಾಳ್ಳುಪೇಟೆಯಲ್ಲಿ ಭಾನುವಾರ ಬಿ.ಸಿದ್ದಣ್ಣಯ್ಯ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಹೃದಯೋನ್ಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವೇಚನ ನೀಡಿದರು.
ಮಕ್ಕಳಿಗಾಗಿ ಸಂಪತ್ತು ಶೇಖರಿಸಿಡುವ ಬದಲು ಅವರನ್ನೇ ದೇಶದ ಆಸ್ತಿಯಾಗಿ ರೂಪಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗದ ನಂತರ ವಿದೇಶಕ್ಕೆ ಹೋಗುವ ಬದಲು ಇಲ್ಲಿಯೆ ಏನಾದರೂ ಸಾಧಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರ ತಿಲಕ್, ಕುವೆಂಪು ಅವರನ್ನು ಆದರ್ಶವಾಗಿ ಪರಿಗಣಿಸಬೇಕು ಎಂದರು.
ಗುರು ಪ್ರತ್ಯಕ್ಷ ದೈವ: ಪ್ರತಿ ಮಕ್ಕಳೂ ಗುಲಾಬಿ ಗಿಡದಂತೆ. ಕಸಿ ಮಾಡದಿದ್ದರೆ ಮೈತುಂಬಾ ಮುಳ್ಳು ತುಂಬಿಕೊಂಡು ಗಿಡ ಬೇರೆಯವರಿಗೆ ನೋವುಂಟು ಮಾಡುವಂತಾಗುತ್ತದೆ. ಆದರೆ, ಶಿಕ್ಷಕರು, ಗುಲಾಬಿ ಗಿಡದಂತಹ ಮಕ್ಕಳನ್ನು ಕಸಿ ಮಾಡಿ, ಹೂ ಅರಳಿಸಿ ಅವರ ಬದುಕನ್ನು ಸುಂದರಗೊಳಿಸುತ್ತಾರೆ. ಪ್ರತಿಯೊಬ್ಬರನ್ನು ಗುರುವನ್ನು ದೇವರ ಸಮಾನವಾಗಿ ಕಾಣಬೇಕು ಎಂದರು.
ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ: ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕಾರ್ಜುವಳ್ಳಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈಗಿನ ಪೋಷಕರು ಅತಿಯಾದ ಕಾಳಜಿ ತೋರಿಸಿ ಮಕ್ಕಳ ದಾರಿ ತಪ್ಪಿಸುತ್ತಿದ್ದಾರೆ. ರ್ಯಾಂಕ್ ಎಂಬ ಭೂತವನ್ನು ತಲೆಯಲ್ಲಿ ತುಂಬಿ ಅವರ ವ್ಯಕ್ತಿತ್ವ ಮತ್ತು ಮನುಷ್ಯರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿದ್ದಾರೆ ಎಂದರು.ಎವಿಕೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಲ್.ಮಲ್ಲೇಗೌಡ ಮಾತನಾಡಿ, ಇಂದು ಗುರು-ಶಿಷ್ಯ ಪರಂಪರೆ ನಾಶವಾಗುತ್ತಿದೆ. ಶಾಲೆ, ಶಿಕ್ಷಕರು, ವಿದ್ಯಾರ್ಥಿಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಗುರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶೈಕ್ಷಣಿಕ ಕ್ಷೇತ್ರ ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಅಸಮಾಧಾನ: ಹಿಂದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಶಿಕ್ಷೆ ವಿಧಿಸಿ ಶಿಸ್ತು ಬೆಳೆಸುತ್ತಿದ್ದರು. ಇಂದು ಶಿಕ್ಷಕರು ಒಂದು ಏಟು ನೀಡಿದರೆ ಅದು ಕ್ಯಾಮರಾ ಕಣ್ಣಿಗೆ ಬಿದ್ದು ಶಿಕ್ಷೆಯಾಗುತ್ತದೆ. ಆದರೆ ಅಮಾಯಕ ಶಿಕ್ಷಕರ ಮೇಲೆ ಹಲ್ಲೆ ನಡೆದ ಪ್ರಕರಣಗಳಲ್ಲಿ ಹಲ್ಲೆ ನಡೆಸಿದವರ ಅಪರಾಧ ಮಾಧ್ಯಮಗಳಿಗೆ ಕಾಣಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ಲಾಘನೀಯ: ವಿನಾಯಕ ವಿದ್ಯಾಸಂಸ್ಥೆ ಸದಸ್ಯ ಬಿ.ಎ.ಜಗನ್ನಾಥ್ ಮಾತನಾಡಿ, ಎಲ್ಲರಿಗೂ ತಮ್ಮ ಶಾಲಾ ಜೀವನ ಅವಿಸ್ಮರಣಿಯವಾದದ್ದು, ಸಿದ್ದಣ್ಣಯ್ಯ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗ ನಿವೃತ್ತರಾದ ಎಲ್ಲಾ ಶಿಕ್ಷಕರನ್ನು ಒಟ್ಟಾಗಿ ಸೇರಿಸಿ ಒಂದೆ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಗುರುಗಳನ್ನು ಗೌರವಿಸಿರುವುದು ಶ್ಲಾಘನೀಯ ಎಂದರು.