ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
ಸಕಲೇಶಪುರ: ಕ್ರೈಸ್ತ ಧರ್ಮಗುರುವೊಬ್ಬರ ನಿವಾಸದ ಹೆಂಚು ತೆಗೆದು ಒಳ ನುಗ್ಗಿದ ನಾಲ್ವರು ದುಷ್ಕರ್ಮಿಗಳ ತಂಡ ಧರ್ಮಗುರುವನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಪಟ್ಟಣದ ಲಕ್ಷ್ಮಿಪುರಂ ಬಡಾವಣೆಯ ದಯಾಳುಮಾತೆ ದೇವಾಲಯದ ಧರ್ಮಗುರು ವಿನ್ಸೆಂಟ್ ಡಿಸೋಜಾ(35) ಹಾಗೂ ಅವರ ನಿವಾಸದಲ್ಲಿದ್ದ ವೃದ್ಧೆ ಎಲ್ಲೂ ಬಾಯಿ(88) ಹಲ್ಲೆ ಗೊಳಗಾದವರು.
ಮುಸುಕುಧಾರಿ ನಾಲ್ವರು ದರೋಡೆಕೂರರು ಮುಂಜಾನೆ 3 ಗಂಟೆ ಸಮಯದಲ್ಲಿ ಅಡುಗೆ ಮನೆಯ ಹೆಂಚು ತೆಗೆದು ಒಳನುಗ್ಗಿದ್ದು, ಈ ಸಂದರ್ಭದಲ್ಲಿ ಎಚ್ಚರಗೊಂಡ ಎಲ್ಲೂ ಬಾಯಿ ವೃದ್ಧೆ ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲೆ ಇದ್ದ ಸೀರೆ ಬಳಸಿ ಕಟ್ಟಿ ಹಾಕಿದರು. ಕಿರಿಚಾಟ ಕೇಳಿ ಹೊರ ಬಂದ ವಿನ್ಸೆಂಟ್ ಡಿಸೋಜಾಗೂ ಚೂರಿಯಿಂದ ಹಲ್ಲೆ ನಡೆಸಿ ಕಟ್ಟಿಹಾಕಿ ಚಿನ್ನಾಭರಣ ಹಾಗೂ ಸುಮಾರು 90 ಸಾವಿರ ನಗದು ದೋಚಿದ್ದಾರೆ. ಹೋರಾಟದಲ್ಲಿ ವಿನ್ಸೆಂಟ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚುಗಾರರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ.
ಚಾಲಕಿತನ: ಘಟನೆಯನ್ನು ಯಾರಿಗೂ ತಿಳಿಸಬಾರದು ಎಂಬ ದೃಷ್ಟಿಯಲ್ಲಿ ವಿನ್ಸೆಂಟ್ ಮೊಬೈಲ್ ಬ್ಯಾಟರಿ ತೆಗೆದುಕೊಂಡು ಹೋಗಿದ್ದು, ಮೊಬೈಲ್ ಅಪಹರಿಸಿದ್ದರೆ ಸಿಗ್ನಲ್ ಆಧಾರದ ಮೇಲೆ ಸಿಕ್ಕಿಬಿಳುವ ಅಪಾಯ ಹೆಚ್ಚಿರುವುದರಿಂದ ಕೇವಲ ಬ್ಯಾಟರಿ ಅಪಹರಿಸಿದ್ದಾರೆ
ಎಂದು ಹೇಳಿಲಾಗಿದೆ.
ಬಿರುಗಾಳಿಗೆ ಮನೆ ಮೇಲೆ ಉರುಳಿದ ಮರಗಳು
ಸಕಲೇಶಪುರ: ತಾಲೂಕಿನಲ್ಲಿ ಗುರುವಾರ ಸುರಿದ ಬಿರುಗಾಳಿ ಮಳೆಗೆ ಮನೆಯ ಛಾವಣಿಗಳು ಹಾರಿಹೋಗಿದ್ದು, ಮರಗಳು ಮನೆಗಳ ಮೇಲೆ ಬಿದ್ದು ಹಾನಿಗೊಂಡಿರುವ ಘಟನೆ ನಡೆದಿದೆ. ಹಾನುಬಾಳ್ ಹೋಬಳಿಯಾದ್ಯಂತ ಗುಡುಗು ಸಿಡಿಲಿನೊಂದಿಗೆ ಬಿರುಗಾಳಿ ಸಹಿತ ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಹೆನ್ನಲಿ ಗ್ರಾಮದ ಮಹಡಿ ಮನೆ ರಾಜಶೇಖರ್ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ತೆಂಗಿನ ಮರವೊಂದು ಬಿದ್ದು ಕೊಟ್ಟಿಗೆ ಭಾಗಶಃ ಹಾನಿಗೊಂಡಿದೆ.
ಸಿದ್ದೇಶ್ ಎಂಬುವರ ಮನೆಯ ಹೆಂಚುಗಳು ಹಾರಿ ಹೋಗಿದ್ದು, ನಷ್ಟ ಸಂಭವಿಸಿದೆ. ಗಾಣದಹೊಳೆಯ ಎಚ್.ಡಿ ದುರ್ಗಪ್ಪ ಎಂಬುವರ ಶೆಡ್ ಗಾಳಿಗೆ ಹಾರಿ ಪಕ್ಕದ ಗದ್ದೆಗೆ ಬಿದ್ದಿದೆ. ಇದೆ ಗ್ರಾಮದಲ್ಲಿ ನೂರಾರು ಅಡಕೆ ಮರ, ಬಾಳೆ ನೆಲಕ್ಕುರಳಿದ್ದರೆ, ನಾಲ್ಕು ವಿದ್ಯುತ್ ಕೆಂಬಗಳು ನೆಲಕ್ಕೆ ಉರುಳಿ ಬಿದ್ದ ಪರಿಣಾಮ, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿದ್ದು ವಾಹನ ಸಂಚರಕ್ಕೆ ಅಡಚಣೆ ಉಂಟಾಗಿದೆ.
ಹಾಸನದಲ್ಲೂ ಮಳೆ: ನಗರ ಸೇರಿದಂತೆ ತಾಲೂಕಿನಲ್ಲಿಯೂ ಗುರುವಾರ ಮಧ್ಯಾಹ್ನ 1.40 ರಿಂದ ಆರಂಭಗೊಂಡ ಮಳೆ ಬಿಟ್ಟು ಬಿಟ್ಟು ರಾತ್ರಿಯವರೆಗೂ ಸುರಿಯಿತು. ಗುಡುಗು-ಮಿಂಚಿನ ಆರ್ಭಟ ಜೋರಾಗಿಯೇ ಇತ್ತು. ಬಿಸಿಲಿನ ತಾಪದಿಂದ ನಲುಗಿದ್ದ ಜನರಿಗೆ ಮಳೆ ತಂಪೆರೆಯಿತು.
ಉಚ್ಚಂಗಿ ಅಂಗನವಾಡಿ ದುಃಸ್ಥಿತಿ ಕೇಳುವವರ್ಯಾರು?
ಸಕಲೇಶಪುರ: ಬಿರುಕು ಬಿಟ್ಟ ಗೋಡೆಗಳು... ರೀಪುಗಳಿಲ್ಲದ ಛಾವಣಿ... ಇದರ ತಳದಲ್ಲೆ ಆಡುವ ಚಿಣ್ಣರು...
ಹೌದು, ಇದು ಕಂಡು ಬಂದಿದ್ದು ತಾಲೂಕಿನ ಉಚ್ಚಂಗಿ ಅಂಗನವಾಡಿ ಕಟ್ಟಡದಲ್ಲಿ. ಸಂಪೂರ್ಣ ಶಿಥಿಲಗೊಂಡಿರುವ ಕಟ್ಟಡದ ಗೋಡೆಗಳು ಬಹುತೇಕ ಬಿರುಕು ಬಿಟ್ಟು ಯಾವಾಗ ಬೇಕಾದರೂ ಬೀಳ ಬಹುದಾಗಿದೆ. ಮೇಲ್ಛಾವಣಿಯಲ್ಲಿ ಹೆಂಚುಗಳನ್ನು ಹಿಡಿದಿಡುವ ರಿಪುಗಳು ಸಂಪೂರ್ಣ ಕಣ್ಮರೆಯಾಗಿವೆ. ಮೇಲ್ಛಾವಣಿಯ ಪಾಕಸ್ಗಳಿಗೆ ಗೆದ್ದಲು ಹಿಡಿದಿರುವ ಪರಿಣಾಮ, ಅಲ್ಲಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿವೆ. ಆದರೆ, ಇದುವರೆಗೆ ಬೀಳದೆ ಇರುವುದು ಮಾತ್ರ ಚಿಣ್ಣರ ಅದೃಷ್ಟವೇ ಸರಿ. ಇಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದು ರಜೆ ಇರುವ ಕಾರಣ 20 ಮಕ್ಕಳು ಅಂಗನವಾಡಿಗೆ ಬರುತ್ತಿವೆ. ಅಂಗನವಾಡಿ ದುರಸ್ತಿ ಬಗ್ಗೆ ಅಂಗನವಾಡಿ ಟೀಚರ್ ಕೇಳಿದರೆ ಪಕ್ಕದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲಾಗಿದೆ ಆದರೆ ಉದ್ಘಾಟನೆಯಾಗದೆ ಅಲ್ಲಿಗೆ ಸ್ಥಳಾಂತರಿಸಲಾಗಿಲ್ಲ ಎನ್ನುತ್ತಾರೆ. ಬಸವ ಜಯಂತಿ ಇಂದು
ಅರಸೀಕೆರೆ: ಬಸವ ಜಯಂತಿ ಅಂಗವಾಗಿ ಪಟ್ಟಣದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ 5.30ಕ್ಕೆ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಬಸವ ಜಯಂತಿ ಅಂಗವಾಗಿ ಕಳೆದ ಒಂದುವಾರದಿಂದ ವೀರಶೈವ ಯುವಕರು ರಾಷ್ಟ್ರೀಯ ಹೆದ್ದಾರಿ ಸಿಂಗರಿಸಿದ್ದು ಹಬ್ಬದ ವಾತವರಣ ಸೃಷ್ಟಿಸಿದೆ. ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಭಕ್ತರಿಗೆ ಪಾನಕ ಫಲಹಾರ ವಿತರಿಸಲಾಗುವುದು. ಅಂದು ಮಧ್ಯಾಹ್ನ 3 ಕ್ಕೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ದೇವಾಲಯದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ನಂದಿಧ್ವಜ, ನಾಸಿಕ್ ಡೋಲ್ ಸೇರಿದಂತೆ ಅನೇಕ ಪ್ರಕಾರದ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಮುಕ್ತಾಯದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವೀರಶೈವ ಯುವಕ ಸಂಘ ತಿಳಿಸಿದೆ.