ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಳಿಗೆಯಲ್ಲ ಕೊಳಚೆ ಕೊಂಪೆ!

Mainashree
Updated On : 2 May 2014, 12:53 pm

ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಪಡೆಯುವ ಬಾಡಿಗೆಗೆ ಸಮರ್ಪಕ ಸವಲತ್ತು ನೀಡುವುದಿಲ್ಲ... ಮಳಿಗೆ ಬಾಡಿಗೆ ಪಡೆದವರು ಸಮರ್ಪಕವಾಗಿ ಬಳಸದಿದ್ದಲ್ಲಿ ಕ್ರಮ ಕೈಗೊಳ್ಳುವುದೂ ಇಲ್ಲ... ಇದು ಪುರಸಭೆ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.
ಇಲ್ಲಿನ ಪುರಸಭೆ ನಿರ್ಮಿಸಿರುವ ಕೆಲವು ಮಳಿಗೆಗಳಿಂದ ಕೊಳಚೆ ನೀರು ಬೀದಿಗೆ ಬೀಳುತ್ತಿದ್ದು, ಈ ಕೊಳಚೆಯ ನಡುವೆಯೇ ಸಂಚರಿಸಬೇಕಾದ ಅನಿವಾರ್ಯತೆಯ ಕುರಿತು ನಾಗರಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣದ ಹೃದಯ ಭಾಗವಾದ ಗಾಂಧಿ ವೃತ್ತದ ಪಕ್ಕದಲ್ಲಿಯೇ ಪುರಸಭೆ ತನ್ನ ಆದಾಯಕ್ಕಾಗಿ ನಿರ್ಮಿಸಿರುವ ನೂರಾರು ಮಳಿಗೆಗಳಲ್ಲಿ, ಕೆಲವು ಮಳಿಗೆಗಳಂತೂ ಅಕ್ಷರಶಃ ಕೊಳಚೆ ಕೊಂಪೆಯಾಗಿವೆ. ಮಳಿಗೆಗಳ ಮುಂದೆ ನೈರ್ಮಲ್ಯ ಮರೀಚಿಕೆಯಾಗಿದೆ. ಇಲ್ಲಿನ ಯಾವ ಮಳಿಗೆಗಳ ಮುಂದೆ ನೋಡಿದರೂ ಕಸದ ರಾಶಿ ತುಂಬಿರುವುದು ಸಾಮಾನ್ಯವಾದ ದೃಶ್ಯವಾಗಿದೆ.
ಇಲ್ಲಿನ ಎಸ್‌ಎಲ್‌ಎನ್ ಚಿತ್ರಮಂದಿರದ ರಸ್ತೆಯಲ್ಲಿನ ಪುರಸಭಾ ಮಳಿಗೆಗಳ ಮೇಲಂತಸ್ತಿನಲ್ಲಿ ಕೆಲವು ಮಾಂಸಾಹಾರಿ ಹೊಟೇಲ್‌ಗಳಿದ್ದು, ಅವುಗಳಿಂದ ಹರಿಯುವ ತ್ಯಾಜ್ಯದ ಕೊಳಚೆ ನೀರು ಒಳಚರಂಡಿಗೆ ಸೇರದೇ, ಮಳಿಗೆಗಳಿಂದ ಸೋರುತ್ತಿದ್ದು, ಈ ಮಳಿಗೆಗಳ ಕೆಳಭಾಗದಲ್ಲಿನ ಮಳಿಗೆಗಳ ಬಳಿ ಹಾಗೂ ಮುಂಭಾಗದಲ್ಲಿಯೇ ಸೋರುತ್ತಿರುವ ಕಾರಣದಿಂದಾಗಿ ನಿತ್ಯವೂ ಇಲ್ಲಿನ ಮಳಿಗೆದಾರರು ಹಾಗೂ ನಾಗರೀಕರು ಈ ಕೊಳಚೆ ನೀರಿನ ನಡುವೆಯೇ ತಿರುಗಾಡಬೇಕಾದ ಅನಿವಾರ್ಯತೆ ಇದೆ. ಇದು ಇಂದು ನಿನ್ನೆಯ ಕಥೆಯಲ್ಲ, ವರ್ಷಗಳೇ ಕಳೆದರೂ ಇದಾವುದೂ ಇಲ್ಲಿನ ಪುರಸಭೆ ಆಡಳಿತದ ಕಣ್ಣಿಗೆ ಕಾಣುತ್ತಲೇ ಇಲ್ಲ. ಪುರಸಭೆಯು ನಿರ್ಮಿಸಿರುವ ಮಳಿಗೆಗಳಿಗೆ ಅವಶ್ಯಕವಾಗುವಂತಹ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸದ ಕಾರಣದಿಂದಾಗಿ, ಇಲ್ಲಿನ ಮಳಿಗೆಗಳು ಕೊಳಚೆ ನೀರು ಹಾಗೂ ನೈರ್ಮಲ್ಯ ಕೊರತೆ ನಡುವೆಯೇ ದಿನ ನಿತ್ಯದ ವ್ಯಾಪಾರ ವಹಿವಾಟು ನಡೆಯುತ್ತಿದೆ.
ವರ್ಷಕ್ಕೊಮ್ಮೆಯಾದರೂ ಈ ಮಳಿಗೆಗಳ ಛಾವಣಿಗೆ ಚುರುಕಿ ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳುವ ಪುರಸಭೆ, ಈಗಾಗಲೇ ನಾಲ್ಕಾರು ಬಾರಿ ಚುರುಕಿ ಹಾಕಿಸಿ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲಾಗಿದೆ. ಆದರೆ ಸಮಸ್ಯೆಯ ವಿರಾಟ ರೂಪವನ್ನು ಕಾಣಲು ಮಳೆಗಾಲ ಬಂದರೆ ಸಾಕು ಪುರಸಭೆಯ ಕಾಮಗಾರಿ  ಅವಶ್ಯಕತೆ ಮತ್ತು ಗುಣಮಟ್ಟದ ಸಾಕ್ಷಾತ್ ದರ್ಶನವಾಗುತ್ತದೆ. ಪದೇ ಪದೇ ಚುರುಕಿ ಹಾಕಿಸುವ ಪುರಸಭೆ ಯಾವ ಪುರುಷಾರ್ಥಕ್ಕೆ ಕಾಮಗಾರಿ ಮಾಡುತ್ತಿದೆ ಎಂಬುದನ್ನು ಪುರಸಭೆ ಆಡಳಿತ ಹಾಗೂ ಇಲ್ಲಿನ ಸದಸ್ಯರೇ ಹೇಳಬೇಕಿದೆ.
ಇಲ್ಲಿನ ಪುರಸಭಾ ಮಳಿಗೆಗಳ ಮೇಲಂತಸ್ತಿಗೆ ಕಾಲಿಟ್ಟರೆ ಸಾಕು ಪುರಸಭೆ  ಸ್ವಚ್ಛತೆಯ ಗುಣಮಟ್ಟದ ಅರಿವು ಯಾರಿಗಾದರೂ ಆಗುತ್ತದೆ. ನೂರಾರು ಮಳಿಗೆಗಳನ್ನು ನಿರ್ಮಿಸಿ ಆದಾಯ ಮೂಲ ಮಾಡಿಕೊಂಡಿರುವ ಪುರಸಭೆಗೆ ಮಳಿಗೆಗಳ ಸಾಮರ್ಥ್ಯಕ್ಕೆ ಅನುಸಾರವಾಗಿ ಶೌಚಾಲಯ ನಿರ್ಮಿಸಿಕೊಡಲು ಸಾಧ್ಯವಾಗದ ಕಾರಣದಿಂದಾಗಿ ಮಳಿಗೆದಾರರು ಹಾಗೂ ಗ್ರಾಹಕರು ಮೂತ್ರ ವಿಸರ್ಜನೆಗಾಗಿ ಮಳಿಗೆಗಳ ಪಕ್ಕದ ರಸ್ತೆಯನ್ನೇ ಬಯಲು ಶೌಚಾಲಯವಾಗಿ ಬಳಸುತ್ತಿದ್ದಾರೆ. ಇನ್ನಾದರೂ ಪುರಸಭೆಯು ತಾವೇ ನಿರ್ಮಿಸಿರುವ ಮಳಿಗೆಗಳಿಗೆ ಕನಿಷ್ಠ ಸೌಲಭ್ಯವನ್ನಾದರೂ ನೀಡಲು ಮುಂದಾಗಬೇಕಿದೆ. ಪುರಸಭೆ ಅನುದಾನ, ಸ್ವಚ್ಛತೆಯ ಯೋಜನೆಗಳು ಎಲ್ಲವೂ ನಾಗರಿಕರ ತೆರಿಗೆ ಹಣದ ಸಂಗ್ರಹವಾಗಿದ್ದು, ಒಟ್ಟಾರೆ ಸ್ವಚ್ಛತೆ ಕಾರ್ಯವನ್ನು ಪುರಸಭೆ ಮೊದಲು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂಬುದು ಇಲ್ಲಿನ ನಾಗರಿಕರ ಒಕ್ಕೊರಲ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement