ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜೀವ್‌ಗಾಂಧಿ ಸೇವಾ ಕೇಂದ್ರ ಅಪೂರ್ಣ

Mainashree
Updated On : 2 May 2014, 12:54 pm

ಜಾವಗಲ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯ್ತಿಗೂ10 ಲಕ್ಷ ರು. ವೆಚ್ಚದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಿ 4 ವರ್ಷಗಳು ಕಳೆದರೂ ಜಾವಗಲ್ ಹೋಬಳಿ ಕೇಂದ್ರದಲ್ಲಿ ಇನ್ನೂ ಕಟ್ಟಡ ಪೂರ್ಣಗೊಳ್ಳದೇ ಗ್ರಾಮ ಪಂಚಾಯಿತಿ ಕಚೇರಿ ಉಪಯೋಗಕ್ಕೆ ಬಾರದಂತಾಗಿದೆ.
ಜಾವಗಲ್ ಹೋಬಳಿಯ ಎಲ್ಲಾ 9 ಗ್ರಾಮ ಪಂಚಾಯ್ತಿಗಳ ಪೈಕಿ ನೇರ್ಲಿಗೆ, ಕೋಳಗುಂದ, ಅರಕೆರೆ, ಹಂದ್ರಾಳು, ಉಂಡಿಗನಾಳು, ಕಲ್ಯಾಡಿ, ಕರಗುಂದ ಗ್ರಾಮಗಳಲ್ಲಿ ಕಟ್ಟಡಗಳು ಪೂರ್ಣಗೊಂಡು, ಉದ್ಘಾಟನೆ ನೆರವೇರಿದ್ದು ಕಳೆದ 1 ವರ್ಷದಿಂದಲೂ ಗ್ರಾಮ ಪಂಚಾಯಿತಿ ಕಛೇರಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಆದರೆ ಜಾವಗಲ್ ಮತ್ತು ಬಂದೂರು ಗ್ರಾಮದಲ್ಲಿನ ಕಟ್ಟಡಗಳ ಕೆಲಸ ಪೂರ್ಣಗೊಂಡಿಲ್ಲ.
ಬಂದೂರು ಕಟ್ಟಡದ ಕೆಲಸವು ಶೇ. 75ರಷ್ಟು ಪೂರ್ಣಗೊಂಡಿದ್ದು, ಕಿಟಕಿ, ಬಾಗಿಲು, ನೆಲಹಾಸು, ಶೌಚಾ ಲಯ ಕೆಲಸಗಳು ಆಗಬೇಕಾಗಿದೆ. ಜಾವಗಲ್ ಕಟ್ಟಡದ ಕಾಮಗಾರಿಯು ಶೇ. 45ರಷ್ಟು ಪೂರ್ಣಗೊಂಡಿದ್ದು ಆರ್‌ಸಿಸಿ ಹಾಕಿ ಬಿಡ ಲಾಗಿದ್ದು , ಕಿಟಕಿ, ಬಾಗಿಲು, ನೆಲಹಾಸು, ಶೌಚಾಲಯ, ವಿದ್ಯುತ್ ಸಂಪರ್ಕದ ಕೆಲಸಗಳು ಸೇರಿದಂತೆ ಶೇ. 55ರಷ್ಟು ಕೆಲಸಗಳು ಬಾಕಿ ಉಳಿದಿವೆ.
ಅಸಮಾಧಾನ: ಈ ಬಗ್ಗೆ ಹಿಂದಿನ ಕಾರ್ಯದರ್ಶಿಗಳು, ಪಿಡಿಒಗಳು ಹಾಗೂ ಇ.ಒ, ಎಂಜಿನಿಯರಿಂಗ್‌ಗಳಿಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯ ಕಾಮಗಾರಿಯನ್ನು  ಗುತ್ತಿಗೆದಾರರ ಬದಲಾಗಿ ಗ್ರಾಮ ಪಂಚಾಯಿತಿ ವತಿಯಿಂದಲೇ ಎನ್‌ಎಂಆರ್ ಅಡಿಯಲ್ಲಿ  ಮಾಡ ಬೇಕಾಗಿದ್ದು ಅಂದಿನ ಎಸ್.ಆರ್‌ಗೂ ಇಂದಿನ ಎಸ್.ಆರ್.ಗೂ ಹೆಚ್ಚಳ ವಾಗಿದ್ದು ಕಾಮಗಾರಿ ಪೂರ್ಣಗೊಳಿಸಲು ಅಂದಿನ ಮೊತ್ತ ಸಾಕಾಗುವುದಿಲ್ಲವೆಂದು ಹೇಳುತ್ತಾರೆ.
ಅಧಿಕಾರಿ ಸ್ಪಷ್ಟನೆ: ಈ ಬಗ್ಗೆ ಅರಸೀಕೆರೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ  ಮೂರ್ತಿ ಅವರನ್ನು ಸಂಪರ್ಕಿಸಿದಾಗ ಬಂದೂರು, ಜಾವಗಲ್ ಪಿಡಿಒ ಬದಲಾವಣೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಪಿಡಿಒಗೆ ಕಾಮಗಾರಿ ಪೂರ್ಣಗೊಳಿಸಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement