'ಸಕರಾತ್ಮಕ ಭಾವ ಸಾಧನೆ ಮೆಟ್ಟಿಲು'
ಹಾಸನ: ಸಕಾರಾತ್ಮಕ ಮನೋಭಾವದಿಂದ ನಿರಂತರ ಪ್ರಯತ್ನ ಮಾಡಿದರೆ ಯಾರು ಬೇಕಾದರೂ ಮಹತ್ತನ್ನು ಸಾಧಿಸಬಹುದು ಎಂದು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಡಿ.ಜಿ ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆಯವರು ಸೋಂಕಿತ ಮತ್ತು ಬಾಧಿತ ಮಕ್ಕಳಿಗಾಗಿ ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆಯು ಸಮಾಜದಲ್ಲಿ ನಿರ್ಲಕ್ಷಿತ ಮತ್ತು ಶೋಷಿತ ವರ್ಗವನ್ನು ಮೇಲೆತ್ತುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ, ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದರು.
ಕಿವಿಮಾತು: ಬದುಕಿನಲ್ಲಿ ಹುಟ್ಟು ಆಕಸ್ಮಿಕವಾದರೆ, ಸಾವು ಅನಿವಾರ್ಯವಾಗಿದೆ. ಬದುಕಿನಡೆಗೆ ಸಕರಾತ್ಮಕವಾಗಿ ಆಲೋಚನೆ ಮಾಡುತ್ತಾ, ನಕರಾತ್ಮಕ ಅಂಶಗಳನ್ನು ಪರಿಸ್ಥಿತಿಗನುಗುಣವಾಗಿ ಸಕರಾತ್ಮಕಗೊಳಿಸಿಕೊಳ್ಳುತ್ತಾ ಸಕರಾತ್ಮಕ ಮನೊಭಾವನೆಯನ್ನು ಬೆಳೆಸಿಕೊಂಡರೆ ಬದುಕಿದಷ್ಟೂ ದಿನ ಏನಾದರೂ ಸಾಧಿಸುತ್ತಾ ಬದುಕ ಬಹುದು. ಸಾಧನೆ ಸಾಧಕನ ಸೊತ್ತು ಇದಕ್ಕೇ ಯಾವ ನಿರ್ಬಂಧಗಳು ಇಲ್ಲ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯವಾಹಿನಿಗೆ ಬರಲು ಸಾಧ್ಯ: ಸಂಸ್ಥೆಯ ವ್ಯವಸ್ಥಾಪಕ ವಿನ್ಸೆಂಟ್ ಮಾತನಾಡಿ, ವಿವಿಧ ಸಂಘಟನೆಗಳ ಸಹಕಾರದಿಂದಾಗಿ, ಸಮ ಮನಸ್ಸಿನ ಹೊಂದಾಣಿಕೆಯಿಂದಾಗಿ ಸಮಾಜ ಕಾರ್ಯಗಳಿಗೆ ಮುಂದುವರೆಯುತ್ತೇವೆ ಎಂದು ಅಭಿಪ್ರಾಯಪಟ್ಟರು.
ಅಭಿಪ್ರಾಯ: ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ವಿ. ಸುನಿತಾ ಮಾತನಾಡಿ, ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗವು ಜಿಲ್ಲೆಯ ಹಲವಾರು ಸಮಾಜ ಸೇವಾ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದು, ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ನಡೆಸುವ ಎಲ್ಲಾ ಸಮಾಜ ಕಾರ್ಯಗಳಲ್ಲಿ ತಮ್ಮ ಸಹಭಾಗಿತ್ವ ನೀಡುವುದಾಗಿ ಅಭಿಪ್ರಾಯಪಟ್ಟರು.