ಪೂಜೆ ಮಾಡೋದಿಲ್ಲ ಅಂದವರಿಗೆ ಬಹಿಷ್ಕಾರ
ಕ.ಪ್ರ.ವಾರ್ತೆ ಬೇಲೂರು ಮೇ 2
ಗ್ರಾಮ ದೇಗುಲದ ದೇವತೆಯನ್ನು ಪೂಜೆ ಮಾಡುವುದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರಿಂದ ಹಾಲಪ್ಪ ಎಂಬುವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ಸೇರಿದ ಕೆಳಹಳ್ಳಿ ಗ್ರಾಮದಲ್ಲಿ ಹಾಲಪ್ಪ ಎಂಬುವರೇ ಬಹಿಷ್ಕಾರಕ್ಕೆ ಈಡಾದವರು. ಕೆಳಹಳ್ಳಿ ಗ್ರಾಮದ ಕಾಲೋನಿಯಲ್ಲಿ ವಾಸವಾಗಿರುವ ಹಾಲಪ್ಪ ಮತ್ತು ಅವರ ಪತ್ನಿ ಸಾವಿತ್ರಿ ಹಾಗೂ ಇಬ್ಬರು ಮಕ್ಕಳನ್ನು ದೇವಸ್ಥಾನದ ಪೂಜೆ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಹಿಷ್ಕಾರ ಹೇರಲಾಗಿದೆ. ಇದರಿಂದ ಗ್ರಾಮದಲ್ಲಿ ಬದುಕುವುದೇ ದುಸ್ತರವಾಗಿದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಯಾವುದೇ ಸೌಲಭ್ಯ ನೀಡುವಲ್ಲಿ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಹಾಲಪ್ಪ ತಮ್ಮ ಅಳಲು ತೋಡಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಲಪ್ಪ, '30 ವರ್ಷದಿಂದ ನಮ್ಮ ಕುಟುಂಬದವರು ಮುತ್ತಿನಮ್ಮ ದೇವರ ಪೂಜೆ ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿನ ವರ್ಷದಲ್ಲಿ ನಮ್ಮ ಕುಟುಂಬದಲ್ಲೂ ಕೆಲವು ಅಹಿತಕರ ಘಟನೆಗಳು ನಡೆಯತೊಡಗಿದ್ದು, ಇದರಿಂದ ದಿಕ್ಕು ತೋಚದಂತಾಗಿತ್ತು. ತಾವು ಹುಟ್ಟಿದ ನಂತರ ತಾಯಿ ಮಾನಸಿಕ ಅಸ್ವಸ್ಥರಾದರು. ದೇವರಿಗೆ ಪೂಜೆ ಸಲ್ಲಿಸಿ ಹಿಂತಿರುಗುವಾಗ ತಮ್ಮ ತಂದೆಯ ದಿಢೀರ್ ಸಾವು, ಇನ್ನಿತರ ಅಹಿತರ ಘಟನೆ ದೇವರ ಪೂಜೆ ಮಾಡಲು ಹಿಂದೇಟು ಹಾಕಿ ತಮ್ಮ ಕುಟುಂಬದವರು ದೇವರ ಪೂಜೆ ಮಾಡುವುದಿಲ್ಲ ಎಂದು ಹೇಳಿದರು. ಅದರಂತೆ ಪೂಜೆಯನ್ನು ಕೈ ಬಿಟ್ಟಿದ್ದೇವೆ' ಎನ್ನುತ್ತಾರೆ.
ಆದರೆ, ಹಾಲಪ್ಪನವರ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಮುತ್ತಿನಮ್ಮ ದೇವರ ಪೂಜೆ ಮಾಡುವುದು ಹಾಲಪ್ಪ ಕುಟುಂಬದ ಹಕ್ಕು. ಯಾವುದೇ ಕಾರಣಕ್ಕೂ ಪೂಜೆ ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದರೆ ದೇವರಿಗೆ ಸೇರಿದ 30 ಕುಂಟೆ ಜಮೀನನ್ನು ದೇವರಿಗೆ ಬಿಟ್ಟು ಕೊಡಬೇಕು ಹಾಗೂ ಗ್ರಾಮಸ್ಥರ ಬಹಿಷ್ಕಾರವನ್ನು ಸ್ವೀಕರಿಸಬೇಕು ಎಂದು ಪಂಚಾಯಿತಿ ಕಟ್ಟೆಯಲ್ಲಿ ಕಳೆದ ವಾರ ತೀರ್ಮಾನ ಕೈಗೊಳ್ಳಲಾಗಿದೆ.
ಮನವಿ: ಬಹಿಷ್ಕಾರದ ವಾತಾವರಣದಲ್ಲಿ ತಮ್ಮ ಕುಟುಂಬ ಬದುಕುತ್ತಿದ್ದು ತಮಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಹಾಲಪ್ಪ ಮನವಿ ಮಾಡುತ್ತಾರೆ.
ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮೇಗೌಡ ಈ ಬಗ್ಗೆ ಮಾತನಾಡಿ, ಕೆಳಹಳ್ಳಿ ಗ್ರಾಮದಿಂದ ಕಳೆದ ವಾರ ತಮಗೆ ಈ ಬಗ್ಗೆ ದೂರ ಬಂದಿದ್ದು ಎರಡೂ ಕಡೆಯವರು ಒಂದೇ ಕೋಮಿನವರಾದ್ದರಿಂದ ದೂರನ್ನು ಪಿಎಸ್ ಐ ಹಾಗೂ ತಹಸೀಲ್ದಾರರಿಗೆ ಸಲ್ಲಿಸಲಾಯಿತು. ಅವರು ಸೂಕ್ತವಾದ ರಕ್ಷಣೆ ನೀಡುತ್ತಾರೆ ಎಂದು ಅವರಿಗೆ ತಿಳಿ ಹೇಳಿ ತಾವೂ ಸಂಬಂದಪಟ್ಟವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರವಾಣಿ ಕರೆ ಮಾಡಿದ್ದಾಗಿ ತಿಳಿಸಿದರು ಎಂದು ಹಾಲಪ್ಪ ಹೇಳಿದರು.