ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಬಸವ ತತ್ವದಿಂದ ವಿಶ್ವಶಾಂತಿ'

Mainashree
Updated On : 2 May 2014, 11:14 am

ಚನ್ನರಾಯಪಟ್ಟಣ: ಬಸವಣ್ಣನವರ ಒಂದೊಂದು ವಚನಗಳೂ ಕೂಡ ದೇಶದ ಒಳಿತಿಗೆ ಬುನಾದಿಯಾಗಿದ್ದು, ಅವುಗಳನ್ನು ಎಲ್ಲರೂ ಪಾಲನೆ ಮಾಡಿದರೆ ದೇಶ ಶಾಂತಿಯಿಂದ ಕೂಡಿರುತ್ತದೆ ಎಂದು ತುರುವೇಕೆರೆ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಬಸವರಾಜು ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಬಸವಣ್ಣನವರು ಸಾಮಾಜಿಕ ಕಳಕಳಿಯಿಟ್ಟುಕೊಂಡು 12ನೇ ಶತಮಾನದಲ್ಲಿಯೇ ಸಮಾನತೆಯಲ್ಲಿ ಏಕತೆಯನ್ನು ಸಾರಿ ಸಮಾನತೆಯನ್ನು ಸಾರಿದ ಕ್ರಾಂತಿಕಾರಿ ಪುರುಷನಾಗಿದ್ದರು ಎಂದು ತಿಳಿಸಿದರು.
ಅಂತರ್ಜಾತಿ ವಿವಾಹ ಸಮಾನ ಶಿಕ್ಷಣ ಸಾರಿದ ಮಹಾನ್ ಪುರುಷನಾಗಿರುವ ವ್ಯಕ್ತಿಯನ್ನು ಎಲ್ಲಾ ಸಮುದಾಯದವರೂ ಕೂಡ ಅವರ ಆದರ್ಶ ಮತ್ತು ತತ್ವ ಪಾಲನೆ ಮಾಡಬೇಕು ಎಂದು ತಿಳಿಸಿದರು.  ಬಸವಣ್ಣನವರ ವಚನಗಳು ಸಾಮಾನ್ಯ ಭಾಷೆಯಲ್ಲಿದ್ದು, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಅವರು ಸಮಾಜಕ್ಕೆ ಸಾಹಿತ್ಯ ನೀಡಿದ್ದು, ಅವರ ಸಾಹಿತ್ಯವನ್ನು ಎಲ್ಲರೂ ಪಾಲನೆ ಮಾಡಿದರೆ ದೇಶದಲ್ಲಿ ಶಾಂತಿಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಬಾಂಧವ್ಯ ಮೂಡುತ್ತದೆ: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಬಸವೇಶ್ವರ, ಬುದ್ಧ, ಮಹಾವೀರ, ಗಾಂಧೀಜಿ ಅವರುಗಳಗಳು ದೇಶದ ಏಳಿಗೆಗೆ ಶ್ರಮಿಸಿದವರಲ್ಲದೇ, ದೇಶದ ಜನತೆಗೆ ಉತ್ತಮ ಸಾಹಿತ್ಯ ನೀಡಿದ್ದಾರೆ. ಅದನ್ನು ಓದಿ ಪಾಲನೆ ಮಾಡಿದರೆ ಉತ್ತಮ ಬಾಂದವ್ಯ ಮೂಡುತ್ತದೆ ಎಂದು ತಿಳಿಸಿದರು.  ಅಧಿಕಾರದಲ್ಲಿ ಪ್ರಾಮಾಣಿಕತೆ ನಿರೀಕ್ಷಿಸಿದ್ದು, ಅಧಿಕಾರಿಗಳು ಬಸವಣ್ಣನವರನ್ನು ಆದರ್ಶಗಳನ್ನು ಪಾಲನೆ ಮಾಡಿದರೆ ದೇಶದ ಪ್ರಗತಿ ಸಾಧ್ಯವಿದೆ. ಬಸವಣ್ಣ ಕ್ರಾಂತಿಕಾರಿದ ವ್ಯಕ್ತಿಯಾದ ಕಾರಣ ಅವರ ಸಾಹಿತ್ಯದ ತುಣುಕಾದ ಕಾಯಕವೇ ಕೈಲಾಸ ಎಂಬ ವಾಕ್ಯವನ್ನು ವಿಧಾನಸೌಧದ ಮುಖ್ಯದ್ವಾರದಲ್ಲಿ ಬರೆಯಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕುಟುಂಬ- ಕುಟುಂಬಗಳ ಮಧ್ಯೆ ಕಲಹಗಳು ಹೆಚ್ಚುತ್ತಿದ್ದು, ಬಸವಣ್ಣನವರ ಸಮಾಜದ ಜನತೆಗೆ ಉತ್ತಮ ಸಾಹಿತ್ಯವನ್ನು ನೀಡಿದ್ದು, ಜನತೆ ಅವರ ವಚನಗಳನ್ನು ಪ್ರತಿ ದಿನ ಕನಿಷ್ಠ 15 ನಿಮಿಷಗಳಾದರೂ ಓದಿದರೆ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಹೆಚ್ಚುತ್ತದೆ ಎಂದು ತಿಳಿಸಿದರು. ಪಟ್ಟಣದ ಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ತಮ್ಮ ಶಾಸಕರ ಅಭಿವೃದ್ಧಿ ಅನುದಾನದಡಿಯಲ್ಲಿ ಆರ್ಥಿಕ ಮಂಜೂರಾತಿ ನೀಡಲಾಗುವುದು. ಇದರ ಜತೆಗೆ ಪಟ್ಟಣದ ಮೇಗಲಕೇರಿಗೆ ಹೊಂದಿಕೊಂಡಿರುವ ಈಶ್ವರ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್, ಉಪಾಧ್ಯಕ್ಷೆ ಶಿಲ್ಪಾಶ್ರೀನಿವಾಸ್, ತಹಸೀಲ್ದಾರ್ ಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಕಂಠೆ, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜು, ಮಾಜಿ ಸದಸ್ಯ ಪುಟ್ಟಸ್ವಾಮಿ, ವೀರಶೈವ ಸಭಾ ತಾಲೂಕು ಅಧ್ಯಕ್ಷ ಪರಮೇಶ್, ವೀರಶೈವ ಸಮುದಾಯ ಮುಖಂಡರಾದ ವೀರೇಶ್, ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement