ಬಸವಣ್ಣ ಹೋರಾಟ ಆದರ್ಶವಾಗಲಿ
ಹೊಳೆನರಸೀಪುರ: ಸಮಾಜದಲ್ಲಿನ ಎಲ್ಲ ವರ್ಗಗಳಿಗೂ ಸಮಾನತೆ ದೊರೆಯಬೇಕೆಂಬ ದೃಷ್ಟಿಯಿಂದ ಶ್ರಮಿಸಿದ ಬಸವಣ್ಣನವರ ಜೀವನ ಹಾಗೂ ಅವರ ಹೋರಾಟದ ಬದುಕು ಇಂದು ಹಾಗೂ ಮುಂದೆಯೂ ಎಲ್ಲರಿಗೂ ಆದರ್ಶಪ್ರಾಯವಾಗಬೇಕಿದೆ ಎಂದು ಇಲ್ಲಿನ ತಹಸೀಲ್ದಾರ್ ಎಸ್. ರಾಘವೇಂದ್ರ ಹೇಳಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದಾಗಿ ಸರಳವಾಗಿ ಆಚರಿಸಲ್ಪಟ್ಟ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಬಿಜ್ಜಳನ ಆಸ್ಥಾನದಲ್ಲಿ ದೊರೆತಿದ್ದ ದೊಡ್ಡ ಹುದ್ದೆ ತ್ಯಜಿಸಿ, ಸಮಾಜದಲ್ಲಿನ ಮೇಳು-ಕೀಳುಗಳೆಂಬ ಜಾತಿ-ಅಸಮಾನತೆಯ ಕಂದಾಚಾರದ ಬೇರುಗಳನ್ನು ತೊಡೆದುಹಾಕಲು ಪಣತೊಟ್ಟ ಮಹಾನ ಮಾನವತಾವಾದಿ ಬಸವಣ್ಣ ಎಂದು ಅವರು ನುಡಿದರು.
ಸುದೈವದ ಸಂಗತಿ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಮಾತನಾಡಿ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹಾನ್ ಯುಗಪುರುಷರ ಮಾತುಗಳನ್ನು ಎಲ್ಲರೂ ಮಾತನಾಡುತ್ತಾರೆ, ಆದರೆ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಯತ್ನದಲ್ಲಿ ಎಲ್ಲರೂ ಹಿಂದೆ ಬಿದ್ದಿದ್ದೇವೆ ಎಂದರಲ್ಲದೇ, ಬಡವ-ಶ್ರೀಮಂತರ ನಡುವಿನ ಅಂತರ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಆದರೆ ಈ ಅಂತರವನ್ನು ಹೋಗಲಾಡಿಸಲು ಇತರೆ ರಾಷ್ಟ್ರಗಳಿಗಿಂತಲೂ ಯುಗಪುರುಷರು ಭಾರತ ಹಾಗೂ ಕರ್ನಾಟಕದಲ್ಲಿ ಹುಟ್ಟಿರುವುದು ಸುದೈವದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಆಹ್ವಾನವಿದ್ದರೂ ಅಧಿಕಾರಿಗಳು ಬಂದಿಲ್ಲ
ಕಾರ್ಯಕ್ರಮಕ್ಕೆ ಹಾಜರಾಗುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದರೂ ಕೂಡ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿದರೆ ಇನ್ನಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.
ಈ ಬಗ್ಗೆ ತಹಸೀಲ್ದಾರ್ ರಾಘವೇಂದ್ರ ಅವರನ್ನು ವಿಚಾರಿಸಿದಾಗ, ಸಮಾರಂಭಕ್ಕೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದು ಎಂದರು.ತಾಲೂಕಿನ ಎಲ್ಲಾ ವೀರಶೈವ ಸಂಘಟನೆಗಳು ಹಾಗೂ ಮುಖಂಡರಿಗೂ ಆಹ್ವಾನ ನೀಡಿದ್ದರೂ, ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಇನ್ನೊಬ್ಬರನ್ನು ಹೊರತುಪಡಿಸಿ ಇಡೀ ಸಭೆಯಲ್ಲಿ ಹತ್ತು ಜನರಿಲ್ಲದೇ, ಬಸವ ಜಯಂತಿಯನ್ನು ಆಚರಿಸಲಾಯಿತು.