ಶಿಕ್ಷಕರು ಸಾಂಸ್ಕೃತಿಕ ರಾಯಭಾರಿಗಳು
ಹಾಸನ: ಶಿಕ್ಷಕರು ಶಿಷ್ಟ ಹಾಗೂ ಜನಪದ ಸಾಹಿತ್ಯದ ಸಂವಾಹಕರಾಗಿದ್ದು, ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ ಎಂದು ಶಾಂತಿಗ್ರಾಮ ಗ್ರಾಮಸಂಸ್ಕತಿ ಅಧ್ಯಯನ ಕೇಂದ್ರದ ಸಂಚಾಲಕ ಜಿ.ಆರ್. ಮಂಜೇಶ್ ತಿಳಿಸಿದ್ದಾರೆ.
ಅವರು ನಗರದ ರಾಜೀವ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಶ್ರೀಶಂಭುಗೌಡ ಪುರುಷೋತ್ತಮ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರಿಗೆ ತಲುಪಿಸುವ ಅವಶ್ಯಕತೆಯಿದೆ: ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ಜನಪದವನ್ನು ಜನರಿಗೆ ಮುಟ್ಟಿಸಲು ಮೂಲ ಜನಪದ ಭಾಷೆಯ ಗಾಯಕರು ಮತ್ತು ನಾನಾ ಜನಪದ ಕಲೆಗಳ ಕಲೆಗಾರರನ್ನು ಗಣತಿ ಮಾಡಿ ಅವರನ್ನು ಗುರುತಿಸಿ ಅವರಲ್ಲಿರುವ ಕಲೆಯನ್ನು ವಿವಿಧ ರೂಪಗಳಲ್ಲಿ ಸಂಗ್ರಹಿಸಿ ಜನಸಾಮಾನ್ಯರಿಗೆ ತಲುಪಿಸುವ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರ ರಾಜ್ಯ ಜನಪದ ಅಕಾಡೆಮಿಯೊಂದಿಗೆ ಕೈ ಜೋಡಿಸಲಿದೆ ಎಂದರು.
ಸಾಹಿತ್ಯ ಬೆಳೆಸುವ ಅಗತ್ಯವಿದೆ: 'ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜನಪದ ವಿದ್ವಾಂಸ ಅತ್ತಿಹಳ್ಳಿ ದಾಸೇಗೌಡ ಮಾತನಾಡಿ, ಓದು ಜ್ಞಾನವನ್ನು ನೀಡಿದರೆ ಅನುಭವಗಳು ವಿವೇಕವನ್ನು ನೀಡುತ್ತವೆ. ನಮ್ಮ ಜನಪದರು ವಿವೇಕಿಗಳಾಗಿದ್ದು, ತಮ್ಮ ಅನುಭವದ ವಿವೇಕವನ್ನು ಜನಪದಗೀತೆ, ಕಥೆ, ಒಗಟು, ಗಾದೆಗಳಲ್ಲಿ ಅಡಗಿಸಿದ್ದಾರೆ. ಅವುಗಳನ್ನು ಬಳಸುವುದರ ಮೂಲಕ ಜನಪದ ಸಾಹಿತ್ಯವನ್ನು ಬೆಳಸಬೇಕಾದ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೀವ್ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಸುಧೀಶ್ ಮಾತನಾಡಿ, ಶಿಕ್ಷಕರು ತಮ್ಮ ಪಠ್ಯಬೋಧನೆಯ ಸಂದರ್ಭದಲ್ಲಿ ಜನಪದಗಣಿತ, ಒಗಟುಗಳನ್ನು ಬಳಸಿಕೊಳ್ಳುವುದರಿಂದ ಹೆಚ್ಚು ಆಸಕ್ತಿದಾಯಕವಾಗಿ ಬೋಧನೆ ಮಾಡಬಹುದೆಂದು ಉದಾಹರಣೆಗಳ ಮೂಲಕ ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ಧನ್ ಅವರು ದತ್ತಿ ಉಪನ್ಯಾಸದ ಹಿಂದಿನ ಉದ್ದೇಶ ವಿವರಿಸಿದರು. ಗೌ. ಕಾರ್ಯದರ್ಶಿ ಗೊರೂರು ಶಿವೇಶ್ ಅತಿಥಿಗಳನ್ನು ಪರಿಚಯಿಸಿದರು. ಹಾಸನ ತಾಲೂಕು ಅಧ್ಯಕ್ಷ ಮಮತೇಶ್ ಮತ್ತು ಸುದರ್ಶನ್ ಇದ್ದರು.
ಪ್ರಶಿಕ್ಷಣಾರ್ಥಿ ಸೌಮ್ಯ ಪ್ರಾರ್ಥಿಸಿ, ಅಧ್ಯಾಪಕ ಸತ್ಯನಾರಾಯಣ ವೈ.ಕೆ. ಸ್ವಾಗತಿಸಿ, ಲಿಂಗರಾಜು ವಂದಿಸಿದರು. ಪ್ರಶಿಕ್ಷಣಾರ್ಥಿ ಶಿವಕುಮಾರ್ ಮತ್ತು ಮೋಹನಕುಮಾರಿ ನಿರೂಪಿಸಿದರು.