ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಮೇ 3
ತಾಲೂಕಿನ ನಾನಾ ಕಡೆ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಸಾಗಿಸುತ್ತಿರುವ ವರ್ತಮಾನದ ಮೇರೆಗೆ ಇಲ್ಲಿನ ಗ್ರಾಮಾಂತರ ಠಾಣೆಯ ಎಸ್ಸೈ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ 2 ಲಾರಿ ಹಾಗೂ 2 ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಕಟ್ಟಹಳ್ಳಿ ಬಳಿ ಹಾಗೂ ಮಂಗಳಾಪುರ ಗ್ರಾಮದ ಬಳಿ ದಾಳಿ ನಡೆಸಲಾಗಿದೆ.
ಅಕ್ರಮಕ್ಕೆ ಅಡೆತಡೆ ಇಲ್ಲ: ತಾಲೂಕಿನ ಹೇಮಾವತಿ ನದಿ ಪಾತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಆಕ್ರಮವಾಗಿ ಮರಳನ್ನು ತೆಗೆದು ಹೊರ ಊರುಗಳಿಗೆ ಸಾಗಿಸುತ್ತಿರುವವರ ವಿರುದ್ಧ ಸಂಬಂಧಿಸಿದ ಗಣಿ- ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳ ಅಧಿಕಾರಿಗಳು ಮೇಲಿಂದ ಮೇಲೆ ದಾಳಿ ನಡೆಸಿ ಮರಳನ್ನು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ದುಬಾರಿ ದಂಡ ವಿಧಿಸಿದ್ದರೂ ಕೂಡ ಆಕ್ರಮ ಮರಳು ಸಾಗಣೆ ಯಾವುದೇ ಅಡೆ- ತಡೆಗಳಿಲ್ಲದೇ ಸಾಗುತ್ತಲೇ ಇದೆ.
ಆದರೂ, ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ ಕೆಲವು ತಹಸೀಲ್ದಾರರು ತಾವೇ ಖುದ್ದಾಗಿ ಮರಳು ಮಾಫಿಯಾದ ಮೇಲೆ ದಾಳಿ ನಡೆಸಿ ಆಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರಾದರೂ, ಇಲ್ಲಿನ ರಾಜಕೀಯ ಶಕ್ತಿಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿನ ಆಕ್ರಮ ಮರಳು ಸಾಗಣೆಗೆ ಶಾಶ್ವತ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಇಂದು ತಾಲೂಕಿನ ನಾಗರೀಕರುಗಳೇ ಅತ್ಯಂತ ದುಬಾರಿ ಬೆಲೆಯನ್ನು ತೆತ್ತು ಮರಳನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ನಾನಾ ಕಡೆಗಳಲ್ಲಿ ನದಿಯಿಂದ ಮರಳನ್ನು ತೆಗೆಯಲು ಕೆಲವು ಭಾಗಗಳಿಗೆ ಮಾತ್ರವೇ ರಾಯಲ್ಟಿ ನಿಗದಿಗೊಳಿಸಿದ್ದರೂ, ಹೇಮಾವತಿ ನದಿಯ ತೀರದಲ್ಲಿನ ಎಲ್ಲಾ ಕಡೆಗಳಲ್ಲಿಯೂ ಇಂದಿಗೂ ನಿರಂತರ ಆಕ್ರಮ ಮರಳು ಸಾಗಣೆ ನಡೆದೇ ಇದೆ. ಆದರೆ ಅಧಿಕಾರಿಗಳ ಮಟ್ಟದಲ್ಲಿ ಈ ಆಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟದ ಮಾಫಿಯಾ ತಡೆಗಟ್ಟಲು ಇಲ್ಲಿನ ರಾಜಕೀಯ ಶಕ್ತಿಗಳು ಅಡ್ಡ ಬರುತ್ತಿರುವ ಕಾರಣದಿಂದ ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂಬ ಮಾತು ಇಲ್ಲಿನ ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ.