ಕ್ರಿಕೆಟ್ ಒಂದು ವಿದ್ಯೆ: ರಘುರಾಮ್ ಭಟ್
ಅರಸೀಕೆರೆ: ಕ್ರಿಕೆಟ್ ಆಟ ಒಂದು ವಿದ್ಯೆ ಇದ್ದಂತೆ. ಯಾರು ಕಷ್ಟಪಟ್ಟು ಈ ವಿದ್ಯೆಯನ್ನ ಕರಗತ ಮಾಡಿಕೊಳ್ಳುತ್ತಾರೋ ಅವರಿಗೆ ಈ ಕ್ರೀಡೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ತಂದುಕೊಡುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯ ರಘುರಾಮ್ ಭಟ್ ತಿಳಿಸಿದರು.
ಅರಸೀಕೆರೆ ಫ್ರೆಂಡ್ ಯೂನಿಯನ್ ಕ್ಲಬ್ ಆಹ್ವಾನದ ಮೇರೆಗೆ ಪಟ್ಟಣದ ಜೇನುಕಲ್ ಕ್ರೀಡಾಂಗಣಕ್ಕೆ ಆಗಮಿಸಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅವರು, ಯುವ ಆಟಗಾರರು ಕಠಿಣ ಪರಿಶ್ರಮ ಶ್ರದ್ಧೆ ಹಾಗೂ ನಿರಂತರ ಅಭ್ಯಾಸದಿಂದ ವಿಶ್ವದಲ್ಲೇ ಹೆಸರು ಗಳಿಸಲು ಸಾಧ್ಯ ಎಂದರು.
ಟಿಪ್ಪಣಿ: ನಂತರ ಯುವ ಆಟಗಾರರಿಗೆ ತರಬೇತಿ ನೀಡಿ ಇನಿಂಗ್ಸ್ ಎಂದರೇನು, ಬೌಲರ್ ಚೆಂಡನ್ನು ಹೇಗೆ ಹಿಡಿಯಬೇಕು, ಔಟ್ ಸ್ವಿಂಗ್ ಎಸೆತವನ್ನು ಹೇಗೆ ಮಾಡಬೇಕು, ತನ್ನತ್ತ ಬರುತ್ತಿರುವ ಚೆಂಡಿನ ಮೇಲೆ ಬ್ಯಾಟ್ಸ್ಮನ್ ಹೇಗೆ ಎದುರಾಳಿ ಮೇಲೆ ನಿಯಂತ್ರಣ ಸಾಧಿಸಬೇಕು... ಹೀಗೆ ಹತ್ತಾರು ಟಿಪ್ಪಣಿಗಳನ್ನು ನೀಡಿದರು.
ಹಚ್ಚ ಹಸಿರಾಗಿದ್ದಾರೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಘುರಾಮ್ ಭಟ್, ಭಾರತ ಸೇರಿದಂತೆ ವಿಶ್ವಾದ್ಯಂತ ಕ್ರಿಕೆಟ್ ಆಟ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಆಟಗಾರರೂ ಸಹ ನೂರಾರು ವೈಯಕ್ತಿಕ ದಾಖಲೆ ಆಟವಾಡುವ ಮೂಲಕ ವಿಶ್ವಾದ್ಯಂತ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಹಸಿರಾಗಿದ್ದಾರೆ ಎಂದು ಹೇಳಿದರು.
ಎಲ್ಲರ ಸಹಕಾರ ಅಗತ್ಯವಿದೆ: ರಾಜ್ಯದ ಗ್ರಾಮಾಂತರ ಭಾಗದ ಯುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಲಸ ಮಾಡುತ್ತಿದ್ದು ಪ್ರತಿ ತಾಲೂಕಿನಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣವನ್ನ ನಿರ್ಮಿಸಿ, ಆ ಮೂಲಕ ಯುವ ಆಟಗಾರರ ಅಭ್ಯಾಸಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರಕಾರ ಸೇರಿದಂತೆ ಜನಪರ ಸಂಘಸಂಸ್ಥೆಗಳು ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಸೀಕೆರೆ ಫ್ರೆಂಡ್ ಯೂನಿಯನ್ ಕ್ರಿಕೆಟ್ ಕ್ಲಬ್ನ ವ್ಯವಸ್ಥಾಪಕ ತೋಂಟೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಜಿ. ನಿರಂಜನ್, ತಾಲೂಕು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎನ್.ಜಿ. ಮಧು, ಫ್ರೆಂಡ್ಸ್ ಕ್ರಿಕೆಟ್ ತಂಡದ ಆಟಗಾರರಾದ ಮಂಜುನಾಥ್, ಚಂದ್ರಶೇಖರ್, ಗುರುಮೂರ್ತಿ, ಅಶೋಕ್, ಶ್ರೀನಿಧಿ ಮತ್ತಿತರರು ಹಾಜರಿದ್ದರು.