'ಜನಜೀವನ ಹಾಡುಗಳೇ ಜಾನಪದ'
ಹೊಳೆನರಸೀಪುರ: ಜನರ ಬಾಯಿಂದ ಬಾಯಿಗೆ ಬಂದಂತಹ ಪದಗಳು ಜಾನಪದವಾಗಿ ಜನರ ಕಷ್ಟಕಾರ್ಪಣ್ಯಗಳಲ್ಲಿ ರೈತಾಪಿ ಜನ ಕೃಷಿ ಕೆಲಸದಲ್ಲಿ ತೊಡಗಿದಾಗ ಹಾಡುಗಳನ್ನು ಕಟ್ಟುತ್ತಿದ್ದರು. ಈ ಹಾಡುಗಳೇ ಜಾನಪದ ಗೀತೆಗಳಾಗಿವೆ ಎಂದು ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ನುಡಿದರು.
ಇಲ್ಲಿನ ಜಾನಪದ ಪರಿಷತ್ತು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಿದ ಜಾನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ನಾಡೋಜ ಡಾ. ಎಚ್.ಎಲ್.ನಾಗೇಗೌಡರು ತಮ್ಮ ಜೀವಿತಾವಧಿಯ ದುಡಿಮೆಯನ್ನೆಲ್ಲಾ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಲು ಶ್ರಮಿಸಿದ್ದಾರೆ. ಜಾನಪದವನ್ನು ಎಲ್ಲರ ಉಸಿರಾಗಿಸಲು ಅವರು ಶ್ರಮವಹಿಸಿದವರು ಎಂದರು.
ಉಪಪ್ರಾಂಶುಪಾಲೆ ಸೀತಮ್ಮ ಜಾನಪದ ಸಂಸ್ಕತಿ ಉಳಿಸಿ ಬೆಳೆಸಲು ಇಂದಿನ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ತಾಲ್ಲೂಕು ಕ.ರ.ವೇ ಅಧ್ಯಕ್ಷ ಕೆರೆಗೋಡು ಮಹೇಶ್ ಮಾತನಾಡಿ, ಕನ್ನಡ ಭಾಷೆ-ನೆಲ-ಜಲಕ್ಕೆ ಕುತ್ತು ಬಂದರೆ ಕರವೇ ಹೋರಾಟ ಮಾಡಲು ಹಿಂಜರಿಯುವುದಿಲ್ಲ.
ಅಂತೆಯೇ ನಾಡು, ಸಂಸ್ಕತಿ ಉಳಿಸಿ ಬೆಳಸಲು ಶ್ರಮಿಸುತ್ತದೆ ಎಂದು ತಿಳಿಸಿದರು.
ಜಗತ್ಪ್ರಸಿದ್ಧ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾ.ರಾ. ಸುಬ್ಬರಾಯ ಮಾತನಾಡಿ, ಕರ್ನಾಟಕ ಜಾನಪದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಲವಾರು ಸಂಘಟನೆಗಳಲ್ಲಿ ಜಾನಪದ ಪರಿಷತ್ತು ಮುಖ್ಯ ಸ್ಥಾನದಲ್ಲಿದೆ. ನಾಡೋಜ ಡಾ.ಎಚ್.ಎಲ್. ನಾಗೇಗೌಡರ ಪರಿಶ್ರಮದಿಂದ ರಾಮನಗರದಲ್ಲಿರುವ ಜಾನಪದ ಲೋಕ ಜಗತ್ಪ್ರಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡು ನುಡಿಗಾಗಿ ಸಮಾಜ ಸೇವೆ ಮಾಡುತ್ತಿರುವ ಬಾ.ರಾ. ಸುಬ್ಬರಾಯರನ್ನು ನರ್ಸಿಂಗ್ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಹಿರಿಯರಾದ ಗುಂಜೇವು ಅಣ್ಣಾಜಪ್ಪ, ಎಚ್.ಆರ್. ವೀರಬಸಪ್ಪ ಮಾತನಾಡಿದರು. ಖಜಾಂಚಿ ಮಂಜುನಾಥಗುಪ್ತ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರೆ, ಲಕ್ಷ್ಮಿನಾಗರಾಜ್ ಸ್ವಾಗತಿಸಿ, ಸಿ.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಆರ್. ಸುರೇಶ್ ವಂದಿಸಿದರು.
ಈ ಸಂದರ್ಭದಲ್ಲಿ ನಡೆಸಲಾದ ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಿಎಸ್ಸಿ ನರ್ಸಿಂಗ್ನ ಪಿ.ಸಿ. ಕುಮಾರ್ ಪ್ರಥಮ, ಪ್ರಥಮ ಬಿಎಸ್ಸಿ ನರ್ಸಿಂಗ್ನ ಪೃಥ್ವೀರಾಜ್ ದ್ವಿತೀಯ, ತೃತೀಯ ಬಿಎಸ್ಸಿ ನರ್ಸಿಂಗ್ನ ಎವಿಟಾ ಪ್ರಿಯಾಲೋಬೋ ಹಾಗೂ ಇಂದಿರಾ (ತೃತೀಯ) ಬಹುಮಾನ ಗಳಿಸಿದರು.