ರು. 23.56 ಲಕ್ಷ ನಷ್ಟ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಮೇ 3
ತಾಲೂಕಿನ ನಾನಾ ಕಡೆ ಇತ್ತಿಚೆಗೆ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ಸಿಲುಕಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಸುಮಾರು ರು. 23.56 ಲಕ್ಷ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.
ಅವುಗಳ ಸಮೀಕ್ಷೆಯನ್ನು ಕೈಗೊಂಡಿದ್ದು, ಕೂಡಲೇ ಹಾನಿಯ ಕುರಿತಂತೆ ವಿವರವನ್ನು ಉಪ- ವಿಭಾಗಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಹಸೀಲ್ದಾರ್ ಎಸ್.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಶನಿವಾರ ವಿವರ ನೀಡಿದ ಅವರು, ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ನಾನಾ ಗ್ರಾಮಗಳಲ್ಲಿ 275ಮನೆಗಳಿಗೆ ಹಾನಿಯಾಗಿದ್ದರೆ, ಕಸಬಾ ಹೋಬಳಿಯಲ್ಲಿ 80 ಹಾಗೂ ಹಳೇಕೋಟೆ ಹೋಬಳಿಯಲ್ಲಿನ 13 ಮನೆಗಳೂ ಸೇರಿದಂತೆ ಒಟ್ಟು 368ಮನೆಗಳಿಗೆ ಇತ್ತೀಚೆಗೆ ಸುರಿದ ಮಳೆ ಹಾಗೂ ಬಿರುಗಾಳಿಯಿಂದಾಗಿ ಹಾನಿ ಸಂಭವಿಸಿದೆ ಎಂದು ಅವರು ಹೇಳಿದರು. ಈ ಕುರಿತಂತೆ ತಾವು ಈಗಾಗಲೇ ತಮ್ಮ ಇಲಾಖಾ ಸಿಬ್ಬಂದಿಯೊಡನೆ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
ಪರಿಹಾರಕ್ಕೆ ಕ್ರಮ: ಮಳೆ- ಗಾಳಿಯಿಂದಾಗಿ ಹಾನಿಗೊಳಗಾಗಿರುವ ಮನೆಗಳ ವಾರಸುದಾರರುಗಳು, ಹಾನಿಗೆ ಸಂಬಂಧಿಸಿದ ಅರ್ಜಿ, ಗ್ರಾಮಲೆಕ್ಕಾಧಿಕಾರಿಯ ಸ್ಥಳ ಮಹಜರ್ ವರದಿ, ಕಂದಾಯ ಸಲ್ಲಿಕೆಯ ವಿವರ ಹಾಗೂ ಹಾನಿಯ ವಾಸ್ತವತೆಯ ಭಾವಚಿತ್ರಗಳನ್ನು ಸೂಕ್ತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಪರಿಶೀಲಿಸಿ ಉಪ-ವಿಭಾಗಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆದ ನಂತರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರರು ತಿಳಿಸಿದರು.
ಕೃಷಿಕರ ನಷ್ಟಕ್ಕೂ ಪರಿಹಾರ: ಪ್ರಾಕೃತಿಕ ವಿಕೋಪ ನಿಧಿಯಡಿಯಲ್ಲಿ ಅವಶ್ಯಕವಾದ ಹಣ ಸಿದ್ಧವಿದ್ದು, ಯಾವುದೇ ಲೋಪವಿಲ್ಲದಂತೆ ಅರ್ಹರಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ ತಹಸೀಲ್ದಾರ್ ರಾಘವೇಂದ್ರ, ಇದೇ ಮಳೆ ಹಾಗೂ ಬಿರುಗಾಳಿಯ ಹೊಡೆತದಿಂದ ಕೃಷಿ ಇಲಾಖೆ ವ್ಯಾಪ್ತಿಗೆ ಒಳಪಡುವ ಯಾವುದೇ ಬೆಳೆಗಳಿಗೂ ದೊಡ್ಡ ಮಟ್ಟದ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ.
ಆದರೆ ತೊಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡುವ ತೆಂಗು ಹಾಗೂ ಅಡಿಕೆ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿರುವುದಾಗಿ ವರದಿಯಾಗಿದ್ದು, ಈ ಕುರಿತಂತೆ ತೊಟಗಾರಿಕೆ ಇಲಾಖೆಯಿಂದ ಸಂಪೂರ್ಣ ವರದಿ ಹಾಗೂ ದಾಖಲೆಗಳು ಬಂದ ನಂತರ ಅವುಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕ್ರಮಕ್ಕೆ ಶಿಫಾರಸು: ಮಳೆ ಹಾನಿಯಿಂದ ಸಂಭವಿಸಿರುವ ನಷ್ಟದ ಪರಿಹಾರದ ಕುರಿತಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಈಗಾಗಲೇ ತಮ್ಮ ಕಂದಾಯ ಇಲಾಖೆಯ ಸಂಬಂಧಿಸಿದ ಸಿಬ್ಬಂದಿಯೊಂದಿಗೆ 3 ಬಾರಿ ಸಭೆ ನಡೆಸಲಾಗಿದ್ದು, ಉಪ-ವಿಭಾಗಾಧಿಕಾರಿಗಳಿಗೆ ನಷ್ಟದ ಕುರಿತಾದ ವಿವರವನ್ನು ನೀಡಿದ ನಂತರ ಪರಿಹಾರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಅಲ್ಲದೇ ಮಳೆ ಹಾನಿಯಿಂದಾಗಿ ತಾಲೂಕಿನ ನಾನಾ ಕಡೆಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಲ್ಲದೇ, ಇಲಾಖೆಗೂ ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದ್ದು ತಾಲೂಕಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯ ವಿವರವನ್ನೂ ನೀಡುವಂತೆ ಸೂಚಿಸಿರುವುದಾಗಿ ತಹಸೀಲ್ದಾರ್ ಎಸ್. ರಾಘವೇಂದ್ರ ತಿಳಿಸಿದರು.
ಪ್ರಾಕೃತಿಕ ವಿಕೋಪ ನಿಧಿಯಡಿಯಲ್ಲಿ ಪರಿಹಾರ ನೀಡಲು ಅವಶ್ಯಕವಾದ ಹಣ ಸಿದ್ಧವಿದೆ. ಕೃಷಿ ಇಲಾಖೆ ವ್ಯಾಪ್ತಿಗೆ ಒಳಪಡುವ ಬೆಳೆ ನಷ್ಟದ ಕುರಿತು ಯಾವುದೇ ವಿವರ ಬಂದಿಲ್ಲ. ಆದರೆ, ತೋಟಗಾರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುವ ತೆಂಗು, ಅಡಕೆ ನಷ್ಟದ ಬಗ್ಗೆ ವಿವರ ಬಂದಿದೆ. ಸೂಕ್ತ ವರದಿ ದಾಖಲೆಗಳು ಲಭ್ಯವಾದ ನಂತರ, ಪರಿಹಾರ ವಿತರಿಸಲಾಗುವುದು.
- ರಾಘವೇಂದ್ರ
ತಹಸೀಲ್ದಾರ್, ಹೊಳೆನರಸೀಪುರ