ಆಧುನಿಕತೆ ಗುಂಗಲ್ಲಿ ಧಾರ್ಮಿಕತೆ ಮಾಯ
ಚನ್ನರಾಯಪಟ್ಟಣ: ಮನುಷ್ಯ ಆಧುನಿಕತೆಯ ಮಜಲಿಗೆ ಸಿಲುಕಿಕೊಂಡು ಧಾರ್ಮಿಕ ಜಗತ್ತಿನ ನಂಬಿಕೆಗಳನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಬೇಡಿಗನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ವೆಂಕಟರಮಣ ಸ್ವಾಮಿ ದೇವಸ್ಥಾನದ ಉಧ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಆಧುನಿಕ ಕಾಲದಲ್ಲಿ ಧಾರ್ಮಿಕ ಜಗತ್ತಿನಲ್ಲಿ ನಂಬಿಕೆಗಳನ್ನು ಕಳೆದಕೊಳ್ಳುತ್ತಿರುವ ಮನುಷ್ಯ ತನ್ನ ಮನಶಾಂತಿಗಾಗಿ ಮತ್ತೆ ದೇವರ ಬಳಿಯೇ ಹೋಗಬೇಕಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ದೇವರು ಹಾಗೂ ದೇವಮಂದಿರಗಳ ಮೇಲಿನ ನಂಬಿಕೆಗಳು ಉಳಿದಿದೆ. ಭಕ್ತಿ ಬಾವನೆಗಳನ್ನು ಅವರಿಂದ ಅಳಿಸಲು ಸಾಧ್ಯವಾಗುವುದಿಲ್ಲ. ಅವರ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹಿರಿಯರು ಈ ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸಮಾರಂಭಗಳನ್ನು ನಡೆಸಲು ಸಮುದಾಯ ಭವನದ ಅಗತ್ಯವಿದೆ. ಈ ಬಾರಿ ಚುನಾವಣೆಯ ಫಲಿತಾಂಶದಲ್ಲಿ ತಮ್ಮ ಗೆಲುವು ಖಚಿತವಾಗಿದ್ದು, ರು. 25 ಲಕ್ಷ ತಮ್ಮ ಅನುದಾನದಲ್ಲಿ ಮೀಸಲಿಟ್ಟು, ಆನಂತರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಸಮುದಾಯ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಅಧಿಕಾರ ಖಚಿತ: ದೇಶದಲ್ಲಿ ಮೇ 16ರಂದು ನಡೆಯಲಿರುವ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ವಾತಾವರಣವಿದ್ದು, ತೃತೀಯ ರಂಗ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆ ಸರ್ಕಾರದಲ್ಲಿ ತಮ್ಮದು ದೊಡ್ಡ ಪಾತ್ರವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 10ರಿಂದ 12 ಸ್ಥಾನಗಳನ್ನು ತಮ್ಮ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡುತ್ತಾರೆಂದು ನಂಬಿಕೆಯಿದ್ದು, ಕೆಲ ಆಂತರಿಕ ಬೇಸರದಿಂದ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಬಗ್ಗೆ ತಿಳಿದುಬಂದಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳು ಬಂದರೆ ಕೇಂದ್ರದಲ್ಲಿ ದೇವೇಗೌಡ ಅವರು ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್, ಗ್ರಾಮದ ಡಾ. ಚೆಲುವೇಗೌಡ, ಅಣ್ಣೇಗೌಡ, ತೋಪೇಗೌಡ ಹಾಗೂ ಇತರರು ಇದ್ದರು.