ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ ಸೆರೆ ಕಾರ್ಯಾಚರಣೆ ಇಂದಿನಿಂದ

Vishwanath S
Updated On : 5 May 2014, 12:41 pm

ಕ.ಪ್ರ.ವಾರ್ತೆ , ಆಲೂರು , ಮೇ 4
ತಾಲೂಕಿನಲ್ಲಿ ಸೋಮವಾರದಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಪುನರ್ ಆರಂಭವಾಗಲಿದೆ.
ಕಾರ್ಯಾಚರಣೆ ಎಲ್ಲೆಲ್ಲಿ?: ತಾಲೂಕಿನ ಬೆಂಬಳೂರು ಅರಣ್ಯ ಪ್ರದೇಶದಲ್ಲಿ ಆನೆಗಳು 2 ಗುಂಪುಗಳಾಗಿ ಬೀಡುಬಿಟ್ಟಿವೆ. ಕಾಡಾನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿ 3 ಆನೆ ಹಿಡಿದ ನಂತರ ತಮ್ಮನ್ನು ಹಿಡಿಯುತ್ತಾರೆ ಎಂಬ ಭಯದಿಂದ ಎಲ್ಲಾ ಆನೆಗಳು ತಾಲೂಕಿನ ಅರಣ್ಯ ಪ್ರದೇಶದಿಂದ ಸಕಲೇಶಪುರ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದವು. ಅಲ್ಲಿಯೂ 7-8 ಆನೆಗಳನ್ನು ಹಿಡಿದಿದ್ದರಿಂದಾಗಿ ಅಲ್ಲಿಂದ ಎಲ್ಲಿಯೂ ಹೋಗಲಾರದ ಆನೆಗಳು ಪುನಃ ಸ್ವಕ್ಷೇತ್ರಗಳಿಗೆ ಬಂದು ತಲುಪಿವೆ. ಇದರಿಂದಾಗಿ ಮಾಗಡಿಹಳ್ಳಿ ಕ್ಯಾಂಪಿನ ಅರಣ್ಯ ಪ್ರದೇಶದಲ್ಲೇ ಬೀಡು ಬಿಟ್ಟಿರುವುದರಿಂದಾಗಿ ಕಾಡಾನೆ ಹಿಡಿಯಲು ತುಂಬಾ ಅನುಕೂಲವಾಗಲಿದೆ.
ಆನೆ ಹಿಡಿಯುವುದು ಸುಲಭವಲ್ಲ: ಈ ಗುಂಪಿನಲ್ಲಿ ಇರುವ ಆನೆಗಳ ಪೈಕಿ ಕೆಲವು ಆನೆಗಳು ಗರ್ಭ ಧರಿಸಿದ್ದು, ಮರಿ ಆನೆಗಳೂ ಸಹ ಇವುಗಳ ಜತೆ ಇವೆ. ಗಂಡಾನೆಗಳನ್ನು ಹಿಡಿದಷ್ಟು ಸುಲಭವಾಗಿ ಹೆಣ್ಣಾನೆಗಳನ್ನುಹಿಡಿಯುವುದು ಅಷ್ಟು ಸುಲಭವಲ್ಲ ಎಂದು ಕೆಲ ಅಧಿಕಾರಿಗಳು ತಿಳಿಸುತ್ತಾರೆ. ಏಕೆಂದರೆ ಗರ್ಭ ಧರಿಸಿರುವ ಹೆಣ್ಣಾನೆಗೆ ಅರವಳಿಕೆ ಮದ್ದು ನೀಡಿದರೆ ಅದು ಯಾವುದಾದರೂ ಹಳ್ಳಕ್ಕೋ ಅಥವಾ ಗಟ್ಟಿಯಾದ ಕಲ್ಲು ಬಂಡೆಯ ಬಳಿ ಕುಸಿದು ಬಿದ್ದಾಗ ಹೊಟ್ಟೆಯೊಳಗಿನ ಮರಿಯಾನೆಗೆ ಸಾವು ಸಂಭವಿಸುವ ಸಾಧ್ಯತೆ ಇದೆ. ಹೆಣ್ಣಾನೆಗೆ ಅರವಳಿಕೆ ಮದ್ದು ನೀಡಿದರೆ ಅದರ ಮರಿಯೇನಾದರೂ ಅದರ ಗುಂಪಿನಲ್ಲಿದ್ದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕುಸಿದು ಬಿದ್ದ ತಾಯಿಯಿಂದ ದೂರ ಹೋಗುವುದಿಲ್ಲ. ಆ ಮರಿಯಾನೆಗೂ ಅರವಳಿಕೆ ಮದ್ದು ನೀಡಿ ಜತೆಯಲ್ಲಿಯೇ ಹಿಡಿಯಬೇಕಾಗುತ್ತದೆ. ಮರಿಯಾನೆಗೆ ಎಷ್ಟು  ಪ್ರಮಾಣದ ಅರವಳಿಕೆ ನೀಡಬೇಕೆಂಬುದನ್ನು ಗ್ರಹಿಸುವುದು ಕಷ್ಟ. ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ನೀಡಿದರೆ ಮರಿಯಾನೆ ಸಾವು ಸಂಭವಿಸುವ ಸಾಧ್ಯತೆ ಇದೆ.
ಮಂಪರಿನಲ್ಲೇ ಹಿಡಿಯಬೇಕು: ಗರ್ಭಧರಿಸಿರುವ ಹೆಣ್ಣಾನೆಯನ್ನು  ಹಿಡಿಯಬೇಕಾದರೆ ಅದು ಕುಸಿದು ಬೀಳದೆ ಮಂಪರಿನಲ್ಲಿ ಹಾಗೆಯೇ ನಿಲ್ಲುವಷ್ಟು ಪ್ರಮಾಣದಲ್ಲಿ ಅರವಳಿಕೆ ಮದ್ದು ನೀಡಿ ಹಿಡಿಯಬೇಕಾಗಿದೆ. ಈಗಾಗಲೇ 2 ಆನೆಗಳಿಗೆ ರೇಡಿಯೋ ಕಾಲರ್ ಹಾಕಿ ಇಡೀ  ಕಾಡಾನೆ ಗುಂಪಿನ ಚಲವವಲನಗಳನ್ನು ಗುರುತಿಸಿದ್ದು, ಯಾವ ಹೆಣ್ಣಾನೆಯ ಮರಿ ಯಾವುದೆಂದು ಗುರುತಿಸಲಾಗಿದೆ.
ಮಳೆಗೂ ಮುನ್ನವೇ ಹಿಡಿಯಬೇಕು: ಎಲ್ಲಾ ಕಾರ್ಯಾಚರಣೆ ಮಳೆ ಪ್ರಾರಂಭವಾಗುವುದರೊಳಗೆ ಮುಕ್ತಾಯಗೊಳ್ಳಬೇಕಿದ್ದು, ಒಂದು ವೇಳೆ ಮಳೆ ಪ್ರಾರಂಭವಾದರೆ ಕಾರ್ಯಾಚರಣೆಗೆ ಪುನಃ ತಡೆಯಾಗಲಿದೆ. ಈಗಾಗಲೇ ಮಾಗಡಿಹಳ್ಳಿ ಕ್ಯಾಂಪಿನಲ್ಲಿ  ಅರಣ್ಯ ಇಲಾಖೆ ಸಿಬ್ಬಂದಿ ಸಕಲ ಸಿದ್ಧತೆ ನಡೆಸಿದ್ದಾರೆ. 35 ಜನ ಮಾವುತರು, ಕಾವಾಡಿಗಳು ಸೇರಿದಂತೆ 70 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ  ಬೀಡು ಬಿಟ್ಟಿದ್ದಾರೆ. 5 ಲಾರಿಗಳು ಸ್ಥಳದಲ್ಲಿವೆ. 7 ಸಾಕಾನೆಗಳು  ಸ್ಥಳದಲ್ಲೇ ಇದ್ದು, ಈ ಹಿಂದೆ ಕ್ಯಾಂಪಿಗೆ ಆಗಮಿಸಿದ 10 ಆನೆಗಳ  ಪೈಕಿ ಅವಶ್ಯಕತೆ ಇಲ್ಲದ ಕಾರಣ 2 ಆನೆಗಳನ್ನು ವಾಪಸ್ ಕಳುಹಿಸಲಾಗಿದ್ದರೆ, ದಸರಾ ಆನೆ ಅರ್ಜುನನನ್ನು ಕ್ಯಾಂಪಿಗೆ ಆರೈಕೆಗಾಗಿ ಕಳುಹಿಸಲಾಗಿದೆ. ಸೋಮವಾರ ಬೆಳಗ್ಗಿನ ವೇಳೆ ಅರ್ಜುನ  ಪುನಃ ಕ್ಯಾಂಪಿಗೆ  ಸೇರಿಕೊಳ್ಳಲಿದ್ದಾನೆ. ಇದರೊಂದಿಗೆ ಅರವಳಿಕೆ ತಜ್ಞರು, ವೈದ್ಯರು, ಗುರಿಕಾರರು ಕ್ಯಾಂಪಿಗೆ ಸೇರಿಕೊಳ್ಳಲಿದ್ದಾರೆ.
ಇದುವರೆಗೂ ಹಿಡಿದ ಆನೆಗಳ ಸಂಖ್ಯೆ 13
ಗುರುತಿಸಲಾಗಿರುವ ಆನೆಗಳ ಹಿಂಡು 2
ಕಾರ್ಯಾಚರಣೆಯಲ್ಲಿ ಬಳಸಲಾಗುವ ಸಾಕಾನೆ 7
ಸೇವೆಗೆ ಸಿದ್ಧ
35 ಮಾವುತರು, ಕಾವಾಡಿಗಳು
70 ಅರಣ್ಯ ಇಲಾಖೆ ಸಿಬ್ಬಂದಿ
ಕಾರ್ಯಾಚರಣೆ ಮುಖ್ಯಾಂಶ
ಯಾವಾಗ ಆರಂಭ?
ಇಂದಿನಿಂದ
ಎಲ್ಲೆಲ್ಲಿ ?
ಬೆಂಬಳೂರು ಅರಣ್ಯ ಪ್ರದೇಶ, ಮಾಗಡಿಹಳ್ಳಿ ಕ್ಯಾಂಪ್ ಅರಣ್ಯ ಪ್ರದೇಶ
ಗಡುವು
ಮಳೆಗಾಲ
ಆರಂಭಕ್ಕೂ ಮುನ್ನ ಕಾರ್ಯಾಚರಣೆ ಮುಗಿಸಬೇಕು


-ಎಚ್.ವಿ. ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement