'ಸಮಾನತೆ ಸಂದೇಶ ವಿಶ್ವಕ್ಕೆ ಸಾರಿದ ಬಸವಣ್ಣ'
ಅರಸೀಕೆರೆ: ಶ್ರೇಷ್ಠ ದಾರ್ಶನಿಕ ವಿಶ್ವಗುರು ಬಸವಣ್ಣ ಸಮಾಜದ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಂದೇಶವನ್ನು ವಿಶ್ವಕ್ಕೇ ಸಾರಿದ ಕ್ರಾಂತಿ ಪುರುಷ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಜಾವಗಲ್ ಹೋಬಳಿಯನಾಗೇನಹಳ್ಳಿ ಗ್ರಾಮದಲ್ಲಿ ಮಹದೇಶ್ವರ ಸ್ವಾಮಿಯವರ ನೂತನ ದೇವಾಲಯ ಜೀರ್ಣೋದ್ಧಾರ ನೂತನ ಗೋಪುರ ಕಳಸ ಸ್ಥಾಪನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ರೈತರ ಪರ ನಿಲುವು: ತೀವ್ರ ಬರಪರಿಸ್ಥಿತಿಯಿಂದ, ಮಳೆ ಅಭಾವದಿಂದ 8 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದ್ದು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಸರ್ಕಾರ ಸ್ಪಂದಿಸಿ ಆತನಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕು ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಿರಂಜನ ಪೀಠ ಮಾಡಾಳಿನ ರುದ್ರಮುನಿ ಸ್ವಾಮೀಜಿ, ಚಿಕ್ಕಮಗಳೂರು ಬಸವ ಮಂದಿರದ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಹುಚ್ಚೇಗೌಡ, ಲಕ್ಷ್ಮಣ್, ವೀರಶೈವ ಬೆಂಗಳೂರು ಮಹಾಸಂಘದ ಅಧ್ಯಕ್ಷ ಮರಿಸ್ವಾಮಿ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್.ಜಿ. ರೇವಣ್ಣ, ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ. ಬಸವರಾಜು, ಇತರರು ಇದ್ದರು. ಹಿರಿಯ ಸಾಹಿತಿ ಚಟ್ಟನಹಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡಿದರು.
'ಯಡಿಯೂರಪ್ಪ ಕನಸು ನನಸು ಮಾಡುವೆ'
ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, 12ನೇ ಶತಮಾನದ ಶಿವಶರಣರು ಹಾಕಿಕೊಟ್ಟ ಹಾದಿಯಲ್ಲಿ ತಾವು ನಡೆದು ಶಾಸಕರಾದ ಕ್ಷಣದಿಂದಲೂ ಎಲ್ಲಾ ಧರ್ಮದವರನ್ನು ಸಮಾನವಾಗಿ ಕೊಂಡೊಯ್ದು ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟು ಕಾರ್ಯ ನಿರ್ವಹಿಸುತ್ತಿದ್ದೇನೆ. ಹರಗುರುಚರಮೂರ್ತಿಗಳ ಆಶೀರ್ವಾದ ತಮ್ಮ ಮೇಲೆ ಇರುವವರೆಗೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕನಸನ್ನು ನನಸುಗೊಳಿಸುವ ಆಶಯ ಹೊಂದಿರುವುದಾಗಿ ಹೇಳಿದರು.