ಹಳಿ ತಪ್ಪಿದ ಗೂಡ್ಸ್ ರೈಲು
ಸಕಲೇಶಪುರ: ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ ಮಂಗಳೂರು-ಅರಸೀಕೆರೆ ರೇಲ್ವೆ ಸಂಚಾರ ಸ್ಥಗಿತಗೊಂಡ ಘಟನೆ ಭಾನುವಾರ ಸಂಭವಿಸಿದೆ. ತಾಲೂಕಿನ ಶಿರವಾಗಿಲು ರೈಲು ನಿಲ್ದಾಣ ಸಮೀಪದ ಮೈಲಿ ಸುರಂಗ ಮಾರ್ಗದಲ್ಲಿ ಮಂಗಳೂರಿನಿಂದ ಬರುತ್ತಿದ್ದ ಸರಕು ಸಾಗಣೆ ರೈಲು ಹಳಿತಪ್ಪಿದೆ. ಈ ಘಟನೆಯಲ್ಲಿ ರೈಲಿನ 14 ಕಂಟೈನರ್ಗಳು ಹಳಿ ತಪ್ಪಿ ಸುರಂಗ ಮಾರ್ಗದಲ್ಲಿ ಗೋಡೆಗಳಿಗೆ ಬಡಿದಿರುವ ಪರಿಣಾಮ ಈ ಮಾರ್ಗದಲ್ಲಿ ಸಾಗುವ ಯಶವಂತಪುರ- ಕಣ್ಣೂರು- ಕಾರವಾರ ಪ್ರಯಾಣಿಕರ ರೈಲು ಹಾಗೂ ಗೂಡ್ಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಹಳಿ ಮರುಜೋಡಣೆ, ಕಂಟೈನರ್ಗಳನ್ನು ಹಳಿಗೆ ತರುವ ಕಾರ್ಯ ಭರದಿಂದ ಸಾಗಿದ್ದು, ಮುಂದಿನ 48 ಗಂಟೆಗಳ ಕಾಲ ರೈಲು ಸಂಚಾರ ಅಸಾಧ್ಯ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದಾದ ರೈಲು; ಹಣ ವಾಪಸ್
ಮೈಸೂರು: ಸಕಲೇಶಪುರ- ಸುಬ್ರಹ್ಮಣ್ಯ ರೈಲು ನಿಲ್ದಾಣ ನಡುವೆ ಗೂಡ್ಸ್ ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಯಶವಂತಪುರ- ಕಣ್ಣೂರ್-ಕಾರವಾರ ರೈಲು (ರೈಲು ಸಂಖ್ಯೆ 16517- 16523) ಸಂಚಾರವನ್ನು ಭಾನುವಾರ ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಶವಂತಪುರ- ಕಣ್ಣೂರ್-ಕಾರವಾರ ರೈಲು ಸೇಲಂ ಮತ್ತು ಕೊಯಮುತ್ತೂರು ಮಾರ್ಗದಲ್ಲಿ ಭಾನುವಾರ ಸಂಚರಿಸಿದೆ. ಈ ರೈಲಿಗಾಗಿ ಮುಂಗಡವಾಗಿ ಟಿಕೆಟ್ ಪಡೆದುಕೊಂಡಿದ್ದವರಿಗೆ ಮೈಸೂರು ರೈಲು ನಿಲ್ದಾಣದಲ್ಲಿ ಹಣ ವಾಪಸ್ ನೀಡಲಾಗುತ್ತಿದೆ. ಪ್ರಯಾಣಿಕರಿಗೆ ಆದ ತೊಂದರೆಗೆ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೆ. ಅನಿಲ್ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ತಗುಲಿ
ಕಸಕ್ಕೆ ಬೆಂಕಿ
ಮೈಸೂರು: ವಿದ್ಯುತ್ ತಂತಿ ತುಂಡರಿಸಿ ಬಿದ್ದು ಕಸದ ರಾಶಿಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಬಂಬೂ ಬಜಾರ್ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಒಂದೇ ತಂತಿ ಮೂರು ಕಡೆ ತುಂಡರಿಸಿ ಬಿದ್ದಿದ್ದರಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ರಕ್ತದಾನ ಶಿಬಿರ
ಹಾಸನ: ವಾಸವಿ ಜಯಂತಿ ಅಂಗವಾಗಿ ನಗರದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ನಡೆಸಲಾಯಿತು. ರಕ್ತದಾನ ಶಿಬಿರವುರ ವಾಸವಿ ಯುವಜನ ಸಂಘದವತಿಯಿಂದ ನಡೆಯಿತು. ಮೇ 9ರಂದು ದೇವಸ್ಥಾನದ ಹಾಗೂ ಹೇಮಾವತಿ ಬಳಿ ಅನ್ನಸಂತರ್ಪಣೆ ಮತ್ತು ಮಜ್ಜಿಗೆಯನ್ನು ವಿತರಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕೆಂಡದ ದುರ್ಗಮ್ಮ ದೇವಿಪ್ರತಿಷ್ಠಾಪನೆ ನಾಳೆಯಿಂದ
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಕುಂಕುಮದ ಹೊಸೂರು ಗ್ರಾಮದಲ್ಲಿ ಮೇ 6ರಿಂದ ಮೇ 8ರವರೆಗೆ ಲಕ್ಷ್ಮೀ ಚನ್ನಕೇಶವಸ್ವಾಮಿ, ವೆಂಕಟರಮಣಸ್ವಾಮಿ (ಬಾಣದೇವರು), ಆಂಜನೇಯಸ್ವಾಮಿ ಮತ್ತು ಮಾರಮ್ಮದೇವಿ ಗ್ರಾಮದೇವರುಗಳ ಸೇವಾ ಸಮಿತಿಯ ವತಿಯಿಂದ ಕೆಂಡದ ದುರ್ಗಮ್ಮ ಮತ್ತು ಶ್ರೀ ಪಿಳೇಕನಮ್ಮ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೇ 6ರಂದು ರಾಮನಾಥಪುರದ ಕಾವೇರಿ ನದಿ ತೀರದಲ್ಲಿ ವೇದ ಶಾಸ್ತ್ರ ಆಗಮ ಪಂಡಿತರಿಂದ ದೇವರಿಗೆ ಪುಣ್ಯಾಹ ಮತ್ತು ಪ್ರತಿಷ್ಠಾಪನೆಗೆ ತತ್ಸಂಬಂಧ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸಂಜೆ ಗ್ರಾಮದಲ್ಲಿ ದೇವತಾ ಪ್ರತಿಷ್ಠಾಪನೆ, ಗಣಪತಿ ಹೋಮ, ದೇವನಾಂದಿ, ಆಧಿವಾಸಗಳು, ಕಲಾಕರ್ಷಣ ಹೋಮ, ದುರ್ಗಾ ಹೋಮ ಮೊದಲಾದ ವಿವಿಧ ಹೋಮಗಳು ನೆರವೇರಲಿದೆ.
ಅಮ್ಮನವರ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ಮೇ 7ರಂದು ಅಮ್ಮನವರ ಮೆರವಣಿಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಆದಿಜಾಂಬವ ಸಂಸ್ಥಾನದ ಕೋಡಿಹಳ್ಳಿ ಬೃಹನ್ಮಠದ ಪರಮಪೂಜ್ಯ ಮಾರ್ಕಂಡಯ್ಯ ಮಹಾಮುನಿ ಸ್ವಾಮೀಜಿ ಅವರ ದಿವ್ಯಸಾನ್ನಿದ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೇವಾಲಯದ ಧರ್ಮದರ್ಶಿ ಜವರಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಡಿ. ರೇವಣ್ಣ ಹಾಗೂ ತಾಲೂಕಿನ ಜನಪ್ರತಿನಿಧಿಗಳು ಭಾಗವಹಿಸುವರು.
ದೇವರ ಪ್ರತಿಷ್ಠಾ ಬಲಿಪೂಜೆ, ಮಹಾಪೂಜೆ, ಮಂತ್ರಾಕ್ಷತೆ, ದೇವರಿಗೆ ನೈವೇದ್ಯ ಭಕ್ತಾಧಿಗಳಿಗೆ ಅನ್ನಸಂತರ್ಪಣಾ ಕಾರ್ಯ ಮೇ 8ರಂದು ನೆರವೇರಲಿದೆ ಎಂದು ದೇವಾಲಯದ ಸಮಿತಿಯ ಸದಸ್ಯರು ತಿಳಿಸಿದ್ದಾರೆ.'ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣೋತ್ಸವ'
ದಿಡಗ (ಚನ್ನರಾಯಪಟ್ಟಣ ತಾ.): ಮಳೆಗಾಗಿ ಮತ್ತು ಗ್ರಾಮದೋಷ ಪರಿಹಾರಾರ್ಥವಾಗಿ ದಿಡಗ ಹಳೇ ಗ್ರಾಮದಲ್ಲಿ ಲಕ್ಷ್ಮೀವೆಂಕಟೇಶ್ವರ ಕಲ್ಯಾಣೋತ್ಸವ ಹಾಗೂ ನಾಗಪ್ರತಿಷ್ಠಾಪನಾ ಪೂಜೆಯನ್ನು ಇತ್ತೀಚೆಗೆ ನಡೆಸಲಾಯಿತು.
ದಿಡಗ ಹಳೇಗ್ರಾಮದ ಶ್ಯಾನುಭೋಗ ಕುಟುಂಬದವರಿಂದ ಗ್ರಾಮದ ಒಳಿತಿಗಾಗಿ ಲೋಕ ಕಲ್ಯಾಣಾರ್ಥ ಹಾಗೂ 5 ವರ್ಷದಿಂದ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸುತ್ತಿರುವ ಜನ, ಜಾನುವಾರುಗಳಿಗಾದರೂ ಕುಡಿಯಲು ನೀರು, ತಿನ್ನಲು ಹುಲ್ಲು ಬೆಳೆಯುವಂತಾದರೂ ಮಳೆ ಭೂಮಿಗೆ ಬೀಳಲಿ ಮತ್ತು ಗ್ರಾಮದೋಷ ಪರಿಹಾರಾರ್ಥವಾಗಿ ಗ್ರಾಮದಲ್ಲಿ ಲಕ್ಷ್ಮೀವೆಂಕಟೇಶ್ವರ ಕಲ್ಯಾಣೋತ್ಸವ ಮತ್ತು ನಾಗಪ್ರತಿಷ್ಠಾಪನೆ ಪೂಜೆ ನಡೆಸಿದರು.
ಪೂಜಾ ವಿಧಿ ವಿಧಾನಗಳಾದ ಗಣಪತಿಹೋಮ, ನವಗ್ರಹ ಹೋಮ, ಕಳಾಹೋಮ, ಕಳಶ ಸ್ಥಾಪನೆ, ನಾಗ ವಿಗ್ರಹಕ್ಕೆ ಆದಿವಾಸ ಪೂಜೆಗಳು ನಡೆದವು. ಕಾರ್ಯಕ್ರಮಗಳು ಬೆಂಗಳೂರಿನ ಜ್ಯೋತಿಷಿಗಳಾದ ನರಸಿಂಹಮೂರ್ತಿ ಆಚಾರ್, ಅನಂತಾಚಾರ್, ಚೇತನ್ ಶರ್ಮಾ ತಂಡ ಹಾಗೂ ದಿಡಗ ಗ್ರಾಮದ ಅರ್ಚಕರಾದ ರವಿದತ್ತ ಕುಮಾರ್, ಚಂದ್ರಶೇಖರ್, ಇವರ ಸಹಕಾರದೊಂದಿಗೆ ನೆರವೇರಿತು.