ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಪಿಟಿಸಿಎಲ್ ನೌಕರರ ಪ್ರತಿಭಟನೆ

Vishwanath S
Updated On : 6 May 2014, 1:03 am

ಹೊಳೆನರಸೀಪುರ: ವಿದ್ಯುತ್ ನೀಡದ ಬೆಸ್ಕಾಂ ಅಧಿಕಾರಿಗಳನ್ನು ಕಟ್ಟಿ ಹಾಕಿ ಹೊಡೆಯಿರಿ ಎಂದು ಇತ್ತೀಚೆಗೆ ಕೋಲಾರದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ನೀಡಿರುವ ವಿವಾದಾತ್ಮಕಕ ಹೇಳಿಕೆಯನ್ನು ಖಂಡಿಸಿ, ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆನಂತರ, ತಹಸೀಲ್ದಾರ ರಾಘವೇಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಆಗ್ರಹ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಪರಿಶಿಷ್ಟ ಜಾತಿ ವರ್ಗಗಳ ನೌಕರರ ಕಲ್ಯಾಣ ಸಂಘ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸೋಮವಾರದಂದು ಇಲ್ಲಿನ ತಾಲೂಕು ಕಚೇರಿಗೆ ತೆರಳಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು, ಶಾಸಕ ರಮೇಶ್ ಕುಮಾರ್ ಅವರು ಬೆಸ್ಕಾಂ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ವಿನಾಕಾರಣ ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು ಕ್ಷಮೆ ಯಾಚಿಸಬೇಕೆಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಆಕ್ರೋಶ: ಕೋಲಾರದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ನೀಡಿರುವ ಹೇಳಿಕೆಯು ಬೆಸ್ಕಾಂ ನೌಕರರಿಗೆ ಅಗೌರವ ತರುವ ರೀತಿಯಲ್ಲಿದ್ದು, ವಿಧಾನಸಭೆಯ ಮಾಜಿ ಸ್ಪೀಕರ್ ಆಗಿ ಹಾಗೂ ಶಾಸಕರಾಗಿ ಅನುಭವ ಹೊಂದಿರುವ ರಮೇಶ್ ಕುಮಾರ್ ಅವರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು ನೌಕರರ ಕೆಲಸದ ಒತ್ತಡ ಮತ್ತು ಸಮಸ್ಯೆಗಳನ್ನು ಅರಿತು ಮಾತನಾಡಬೇಕಿತ್ತು. ಅಲ್ಲದೇ ಅಧಿಕಾರಿಗಳ ವಿರುದ್ಧ ಹೇಳಿಕೆಗಳನ್ನು ನೀಡುವ ಮೊದಲು ಸಮಸ್ಯೆಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೇಳಬಹುದಿತ್ತು. ಆದರೆ ಏಕಾ ಏಕಿ ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಕಟ್ಟಿಹಾಕಿ ಹೊಡೆಯಿರಿ ಎಂದು ಹೇಳಿಕೆ ನೀಡುವ ಮೂಲಕ ಶಾಸಕರು ಬೆಸ್ಕಾಂ ನೌಕರರಿಗೆ ಅಗೌರವವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಕುಮಾರ್ ಕೂಡಲೇ ಕ್ಷಮೆ ಕೇಳಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ, ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದರು.  
ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಚಂದ್ರೇಗೌಡ, ಎಸ್ಸಿ ಎಸ್ಟಿ ಅಸೋಸಿಯೇಷನ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ರಂಗಸ್ವಾಮಿ, ಎಸ್ಸಿ ಎಸ್ಟಿ ನೌಕರರ ಕಲ್ಯಾಣ ಸಂಸ್ಥೆಯ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ್, ಚೆಸ್ಕಾಂನ ಎಇಇ ಹರೀಶ್, ಗೋಕುಲ್, ಎಎಓ ಲೋಕೇಶ್, ದೇವೇಂದ್ರ, ಜೆ.ಡಿ.ದೇವರಾಜ್, ಶಿವಕುಮಾರ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement