ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತ್ರಿಶಂಕು ಸ್ಥಿತಿಯಲ್ಲಿ ಆಲೂ ಬೆಲೆ

Vishwanath S
Updated On : 6 May 2014, 1:02 am

ಕ.ಪ್ರ.ವಾರ್ತೆ ,  ಹಾಸನ ,  ಮೇ 5
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ದರ ನಿಗದಿ ನಿಮಿತ್ತ ಕರೆದಿದ್ದ 2ನೇ ಸುತ್ತಿನ ಮಾತುಕತೆ ಮತ್ತೆ ವಿಫಲವಾಗಿದೆ. ಜಿಲ್ಲಾಧಿಕಾರಿ ಹಾಗೂ ವರ್ತಕರ ನಡುವೆ ಒಂದೇ ದಿನ 2 ಬಾರಿ ಸಭೆ ನಡೆಸಿದರೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.
ಸೋಮವಾರ ಎರಡು ಬಾರಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸಭೆ ನಡೆಸಿದರೂ, ಸಹ ಜಿಲ್ಲಾಡಳಿತ ಸೂಚಿಸುವಂತೆ ಆಲೂಗಡ್ಡೆ ಮಾರಾಟ ಮಾಡಲು ವರ್ತಕರು ಒಪ್ಪದ ಕಾರಣ ಸಭೆ ವಿಫಲವಾಯಿತು. ತಮಗೆ 2 ಸಾವಿರ ರು.ಗಿಂತ ಕಡಿಮೆ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆಲೂಗಡ್ಡೆ ವರ್ತಕರು ಪಟ್ಟು ಹಿಡಿದರು. ಆದರೆ, ಅವರ ಮಾತನ್ನು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸಮ್ಮತಿಸಲಿಲ್ಲ.  ಇದರಿಂದ ಸಭೆಯನ್ನು ಕೊನೆಗೊಳಿಸಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ನಂತರ ಜಿಲ್ಲಾಡಳಿತದ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ ಅನ್ಬುಕುಮಾರ್, ಅಷ್ಟರೊಳಗೆ ವರ್ತಕರು ತಮ್ಮ ನಿರ್ಧಾರ ಬದಲಿಸಿಕೊಳ್ಳಬಹುದಾಗಿದೆ ಎಂದರು.
ಬೆಳಗ್ಗೆ ನಡೆದ ಸಭೆ:  ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಕಳೆದ ಶನಿವಾರ ನಡೆದ ಸಭೆಯಲ್ಲಿ ರು. 2,200ಕ್ಕಿಂತ ಕಡಿಮೆ ಬೆಲೆ ಮಾರಾಟ ಮಾಡಲು ಸಾಧ್ಯವಿಲ್ಲ. ಹಾಗಾಗಿ, ತಾವು ಸೂಚಿಸುವ ಬೆಲೆಗೇ ಆಲೂಗಡ್ಡೆ ಮಾರಾಟ ಮಾಡಲು ಅನುಮತಿ ನೀಡುವಂತೆ ಪಟ್ಟು ಹಿಡಿದ್ದರು. ಆಗ ಜಿಲ್ಲಾಧಿಕಾರಿ ಅವರು ಇದಕ್ಕೆ ಒಪ್ಪದ ಕಾರಣ ಆಲೂಗಡ್ಡೆ ವರ್ತಕರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಆಲೂಗಡ್ಡೆ ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ. ಅಂತಿಮವಾಗಿ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.  ಅದರಂತೆ ಸೋಮವಾರ ಸಭೆಯಲ್ಲಿ ವರ್ತಕರು ಪ್ರತಿ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ ರು. 2,200ಕ್ಕಿಂತ ಕಡಿಮೆ ಮಾರಲು ಸಾಧ್ಯವಿಲ್ಲ ಎನ್ನುತ್ತಿದ್ದರು. ನಂತರ ರು. 2 ಸಾವಿರ ನ ಒಳಗೆ ಮಾರಲು ಸಾಧ್ಯವಿಲ್ಲ. ಇದಕ್ಕಿಂತ ಕಡಿಮೆ ಮಾರಾಟ ಮಾಡಿದರೆ ವರ್ತಕರಿಗೆ ಸಿಕ್ಕಾಪಟ್ಟೆ ನಷ್ಟ ಉಂಟಾಗಲಿದೆ. ಆದ್ದರಿಂದ ನಮಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಮ್ಮ ನಿರ್ಧಾರ ತಿಳಿಸಿದರು.
ವಿವರ ನೀಡಿದ ಜಿಲ್ಲಾಧಿಕಾರಿ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ವರ್ತಕರು ರೈತರ ಹಿತದೃಷ್ಟಿಯನ್ನು ನೋಡಿ ಆಲೂಗಡ್ಡೆ ದರ ಕಡಿಮೆ ಮಾಡಬೇಕು. ಪಂಜಾಬ್‌ನ ಜಲಂದರ್‌ನಲ್ಲಿ ಕಳೆದ ಫೆಬ್ರವರಿಯಲ್ಲಿ ಆಲೂಗಡ್ಡೆ ದರ ರು. 900 ಇತ್ತು. ಮಾರ್ಚ್‌ನಲ್ಲಿ ರು. 1020 ಇತ್ತು. ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿಯಲ್ಲಿ ರು. 550ರಿಂದ ರು. 600 ದರವಿತ್ತು. ಆದ್ದರಿಂದ ಆಲೂಗಡ್ಡೆಯನ್ನು ಹಿಂದೆಯೇ ಜಲಂದರ್‌ನಿಂದ ತಂದು ಇಲ್ಲಿ ಶೀಥಲಘಟಕದಲ್ಲಿ ಸಂಗ್ರಹ ಮಾಡಲಾಗಿದೆ.   ಹೀಗೆ, ಆಲೂಗಡ್ಡೆಯನ್ನು ಈ ರೀತಿ ಸಂರಕ್ಷಿಸಿದರೆ ವರ್ತಕರ ವೆಚ್ಚ ಹೆಚ್ಚಾಗುವುದು ನಿಜ. ಕಳೆದ ವರ್ಷ ಕ್ವಿಂಟಾಲ್‌ಗೆ ರು. 1,40 ನಿಗದಿ ಮಾಡಲಾಗಿತ್ತು. ಆದ್ದರಿಂದ ವರ್ತಕರು ರು. 2 ಸಾವಿರಕ್ಕೆ ಮಾರಾಟ ಮಾಡಿದರೆ ರೈತರಿಗೆ ತೊಂದರೆ ಉಂಟಾಗಲಿದೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗಡ್ಡೆ ಪ್ರಸ್ತುತ 20 ಸಾವಿರ ಹೆಕ್ಟೇರ್‌ಗೆ ಇಳಿಮುಖವಾಗಿದೆ. ಆದ್ದರಿಂದ ದರ ಕಡಿಮೆಯಾದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಡಿಸಿ ಮನವಿ: ರೈತರ ಹಿತ ಕಾಪಾಡುವ ದೃಷ್ಟಿಯಿಂದ ಈ ಸಭೆ ನಡೆಸುತ್ತಿದ್ದು, ವರ್ತಕರು ಕೇವಲ ಲಾಭ-ನಷ್ಟದ ಬಗ್ಗೆ ಅಲೋಚನೆ ಮಾಡುವ ಬದಲಾಗಿ ರೈತರ ಯೋಗ ಕ್ಷೇಮ ಕುರಿತು ಚಿಂತಿಸಿ ಸೌಹಾರ್ಧಯುತವಾಗಿ ರೈತರಿಗೆ ಸಹಕರಿಸಿ, ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದರು. ಜಿಲ್ಲಾಧಿಕಾರಿ ಇಷ್ಟು ವಿವರಿಸಿದರೂ, ವರ್ತಕರು ಅವರ ಮಾತನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗಿ, ಸಭೆ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಯಿತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮದ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಹಾಗೂ ವರ್ತಕರು ಸಭೆಯಲ್ಲಿ ಇದ್ದರು.
ರೈತರ ಹಿತ ಕಾಪಾಡುವ ದೃಷ್ಟಿಯಿಂದ ಈ ಸಭೆ ನಡೆಸುತ್ತಿದ್ದು, ವರ್ತಕರು ಕೇವಲ ಲಾಭ-ನಷ್ಟದ ಬಗ್ಗೆ ಆಲೋಚನೆ ಮಾಡುವ ಬದಲಾಗಿ  ರೈತರಿಗೆ ಸಹಕರಿಸಿ, ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಸಭೆ ವಿಫಲವಾದ ಬಗ್ಗೆ ಸರ್ಕಾರಕ್ಕೆ ತೀರ್ಮಾನ ಸಲ್ಲಿಸುವುದರೊಳಗೆ ವರ್ತಕತರು ತಮ್ಮ ನಿರ್ಧಾರ ತಿಳಿಸಬಹುದು.
- ಅನ್ಬುಕುಮಾರ್ ಜಿಲ್ಲಾಧಿಕಾರಿ
ಡಿಸಿ ಅಸಮಾಧಾನ
ಸಭೆಯಲ್ಲಿ, ವರ್ತಕರ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ, ಬೆಲೆ ನಿಗದಿಗೆ ಸಂಬಂಧಿಸಿದಂತೆ ಪಂಜಾಬ್‌ನ ಆಲೂಗಡ್ಡೆ ವರ್ತಕರು ಹಾಸನದಲ್ಲಿ ಕಿರುಕುಳ ಹಾಗೂ ಬೆದರಿಕೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ, ನಾವು ಅವರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಬೆದರಿಕೆ ಒಡ್ಡುತ್ತಿಲ್ಲ. ಪದೇ ಪದೇ ನೀವು ಆ ಪದವನ್ನು ಏತಕ್ಕೆ ಬಳಕೆ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement