ಭಗವಂತನ ನಾಮಸ್ಮರಣೆಯಿಂದ ನೆಮ್ಮದಿ
ಅರಸೀಕೆರೆ: ಭಗವಂತನ ನಾಮಸ್ಮರಣೆಯಿಂದ ಮಾತ್ರ ನಾವು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗಿದ್ದು, ಏಕಾಗ್ರತೆಯ ಧ್ಯಾನದ ಮೂಲಕ ಅನೇಕ ಸಾಧುಸಂತರು ಭಗವಂತನ ಸಾಕ್ಷಾತ್ಕಾರ ಪಡೆದಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಶ್ರೀರುಕ್ಮಿಣಿ ಪಾಂಡುರಂಗಸ್ವಾಮಿ ದೇವಾಲಯದ 77ನೇ ವರ್ಷದ ದಿಂಡಿ ಮಹೋತ್ಸವ ಹಾಗೂ 3ನೇ ವರ್ಷದ ಸಾಮೂಹಿಕ ಜ್ಞಾನೇಶ್ವರಿ ಪಾರಾಯಣ ಸಪ್ತಾಹ ಧಾರ್ಮಿಕ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನ ಪದ್ಧತಿಗೆ ನಾವುಗಳು ಮಾರು ಹೋಗುತ್ತಿರುವ ಕಾರಣ ಅನೇಕ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಎಂಬುವುದು ದೂರವಾಗುತ್ತಿದೆ. ಮನುಷ್ಯನ ಪ್ರತಿಯೊಂದು ಕ್ಷಣಗಳು ಇಂದು ಅತಂಕದಲ್ಲಿ ಮುಳುಗಿರುವ ಕಾರಣ ಆತನ ಅತ್ಯಮೂಲ್ಯ ಬದುಕಿಗೆ ಬೇಕಾದ ಸುಖ, ಶಾಂತಿ ಮತ್ತು ನೆಮ್ಮದಿ ಸಮಾಜದಲ್ಲಿ ಕಾಣದಾಗುತ್ತಿದೆ ಎಂದು ವಿಷಾದಿಸಿದರು.
ಆಧುನಿಕತೆಯ ಡಂಬಾಚಾರದಲ್ಲಿ ದೇವರ ಆಸ್ತಿತ್ವವನ್ನೇ ಪ್ರಶ್ನಿಸುವ ಜನರು ಒಂದು ಕಡೆಯಿದ್ದರೆ, ಮತ್ತೊಂದು ಕಡೆಯಲ್ಲಿ ಈ ದೇಶದ ಸನಾತನ ಸಂಸ್ಕತಿ ಪ್ರತೀಕವಾದ ದೇವರ ನಾಮಸ್ಮರಣೆ, ಸತ್ಸಂಗ, ಸಂಕೀರ್ತನೆ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಪಡೆದ ನೂರಾರು ಸಾಧುಸಂತರು ಇತಿಹಾಸ ನಮ್ಮದಾಗಿದೆ. ಅಂತಹ ಶ್ರೀಮಂತ ಧಾರ್ಮಿಕ ಪರಂಪರೆಯ ಸಂಸ್ಕೃತಿಯನ್ನು ಭಾವಸಾರ ಕ್ಷತ್ರೀಯ ಸಮಾಜ ಮುಂದುವರೆಸಿಕೊಂಡು ಬರುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ ಮಾತನಾಡಿ, ದೇವರಲ್ಲಿ ಶ್ರದ್ಧಾಭಕ್ತಿ ಹಾಗೂ ಗುರುಹಿರಿಯರಲ್ಲಿ ಗೌರವದ ಭಾವನೆಗಳು ಬೆಳೆದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಹನುಮಂತರಾವ್ ಜ್ಞಾನೇಶ್ವರಿ ಅವರು ಪಾರಾಯಣದ ಬಗ್ಗೆ ಮಾತನಾಡಿ, ಧಾರ್ಮಿಕ ಸತ್ಸಂಗ ಎಂಬುವುದು ಮನುಷ್ಯನಿಗೆ ಸದ್ಭಾವನೆಯ ಪ್ರೇರಕ ಶಕ್ತಿ ನೀಡುತ್ತಿದೆ ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರರಿಗೆ ಬಹುಮಾನ ವಿತರಣೆ ಮಾಡಿದರು. ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಪುರಸಭೆ ಸದಸ್ಯ ಬಿ.ಎನ್. ವಿದ್ಯಾಧರ್, ಬಬ್ರುವಾಹನ ರಾವ್, ಪಾರ್ಥಸಾರಥಿ, ಭಾವಸಾರ ಕ್ಷತ್ರಿಯ ಮಹಿಳಾ ಮಂಡಲಿ ಅಧ್ಯಕ್ಷ ಪ್ರಿಯ. ಎಸ್. ಮಹೇಂದ್ರಕರ್, ಹಿರಿಯ ಅರ್ಚಕ ವೆಂಕಟರಾಮಯ್ಯ ಇನ್ನಿತರರು ಇದ್ದರು. ಮಮತ ಮತ್ತು ವಾಣಿಶ್ರೀ ಪ್ರಾರ್ಥಿಸಿದರು, ಶಂಕರ್ ರಾವ್ ಸ್ವಾಗತಿಸಿ, ವಂದಿಸಿದರು.