ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಮೇಶ್ ಕುಮಾರ್ ಹೇಳಿಕೆ ಖಂಡಿಸಿ ಧರಣಿ

Vishwanath S
Updated On : 6 May 2014, 1:03 am

ಕನ್ನಡಪ್ರಭ ವಾರ್ತೆ ,  ಹಾಸನ ,   ಮೇ 5
ಕೋಲಾರದಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ನೌಕರರ ಒಕ್ಕೂಟದ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಸಂತೇಪೇಟೆಯ ವಿದ್ಯುತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಮನವಿ ನೀಡಿದರು.
ಕೋಲಾರದಲ್ಲಿ ಕಳೆದ ಏ. 28ರಂದು ನಡೆದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶಾಸಕ ರಮೇಶ್ ಕುಮಾರ್, ಸಿಬ್ಬಂದಿಯನ್ನು ಕೊಚ್ಚಿರಿ, ಸಾಲಾಗಿ ನಿಲ್ಲಿಸಿ ಕಡಿಯಿರಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮೂರು ದಿನ ಅನ್ನ, ನೀರು ನೀಡಬೇಡಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ರಾಜ್ಯಾದ್ಯಂತ ವಿದ್ಯುತ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಕುಸಿದಿದೆ ಎಂದರು.
ನೌಕರರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದ ನಾನಾ ಕಡೆಗಳಲ್ಲಿ ಶೇ.40ರಿಂದ 50ರಷ್ಟು ಹುದ್ದೆಗಳು ವಿದ್ಯುತ್ ಕಂಪನಿಗಳಲ್ಲಿ ಖಾಲಿ ಇದ್ದು, ಶೇ. 200ಕ್ಕೂ ಮಿಗಿಲಾಗಿ ಕಾರ್ಯಭಾರದ ಹೊರೆ ಹೆಚ್ಚಾಗಿದೆ. ಈ ಸನ್ನಿವೇಶದಲ್ಲಿ ನೌಕರರು ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಸಕ ರಮೇಶ್ ಕುಮಾರ್ ಹೇಳಿಕೆ ಖಂಡನೀಯ ಎಂದರು.
ಖಾಲಿ ಹುದ್ದೆ ತುಂಬಿರಿ: ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಬೇಕು ಹಾಗೂ ವಿದ್ಯುತ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಿ ಅವರ ನೈತಿಕ ಸ್ಥೈರ್ಯ ಹೆಚ್ಚಿಸುವಂತಹ ಕೆಲಸವಾಗಬೇಕು ಹಾಗೂ ಶೀಘ್ರ ಶಾಸಕ ರಮೇಶ್ ಕುಮಾರ್ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಸುಂದರೇಗೌಡ, ಮೋಹನ್ ಕುಮಾರ್, ಟಿ.ನಾಗರಾಜು, ಸ್ಥಳೀಯ ಸಮಿತಿ ಸದಸ್ಯ ರವಿಕುಮಾರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement