ಸರ್ಕಾರಿ ಜಾಗ ಉಳಿಸುವಂತೆ ಗ್ರಾಮಸ್ಥರ ಆಗ್ರಹ
ಹಾಸನ: ಸರ್ಕಾರಿ ಜಾಗದಲ್ಲಿ ಕಾನೂನು ಬಾಹಿರವಾಗಿ ಮನೆ ನಿರ್ಮಿಸುತ್ತಿರುವುದನ್ನು ತಪ್ಪಿಸುವಂತೆ ಆಗ್ರಹಿಸಿ ತಾಲೂಕಿನ ದುದ್ದಾ ಹೋಬಳಿಯ ಬಿ. ಬೈರಾಪುರ ಗ್ರಾಮದ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ತಾಲೂಕಿನ ದುದ್ದ ಹೋಬಳಿಯ ಬಿ. ಬೈರಾಪುರ ಗ್ರಾಮದ ಸರ್ವೇ ನಂ. 24ರಲ್ಲಿ ಸರ್ಕಾರಿ ಗೋಮಾಳವಿದ್ದು, ಇಲ್ಲಿ ದಿವಂಗತ ಬಸವರಾಜು ಅವರ ಪತ್ನಿ ಸಾವಿತ್ರಮ್ಮ ಮತ್ತು ಅವರು ಮಕ್ಕಳು ಒಂದು ವರ್ಷದ ಹಿಂದೆ ಈ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾದಾಗ ಅದನ್ನು ತಡೆಯಲಾಗಿತ್ತು. ಈ ಜಾಗ ಸರ್ಕಾರಿ ಜಾಗ ಆಗಿರುವುದರಿಂದ ಅದು ಯಾರ ಆಸ್ತಿಯೂ ಅಲ್ಲ ಎಂದು ಆ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಲಾಗಿತ್ತು. ಆದ್ದರಿಂದ ಅಲ್ಲಿ ಮನೆ ಕಟ್ಟುವುದನ್ನು ತಾತ್ಕಲಿಕವಾಗಿ ತಡೆಯಲಾಗಿತ್ತು.
ಆರೋಪ: ಈಗ ಮತ್ತೆ ಅವರು ಆ ಜಾಗದಲ್ಲಿ ಮನೆಯನ್ನು ಕಟ್ಟಿಕೊಳ್ಳಲು ಸಿಮೆಂಟ್ ಕಂಬ, ಸೀಟು, ಮರ ಇತ್ಯಾದಿಗಳನ್ನು ಜೋಡಿಸಿಕೊಂಡು ರಾತ್ರೋರಾತ್ರಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಪಕ್ಕದ ಗ್ರಾಮದವರನ್ನು ಕರೆಸಿಕೊಂಡು ಬೆಂಬಲಕ್ಕೆ ನಿಲ್ಲಿಸಿ ಮನೆ ಕಟ್ಟುತ್ತಿದ್ದರು. ಆಗ ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಮಸ್ಥರಿಗೆ ದೈಹಿಕವಾಗಿ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇವರ ಹಲ್ಲೆಗೊಳಗಾದವರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲಾಡ್ಯರಾಗಿ ಹಣಬಲ, ಜನಬಲವುಳ್ಳವರಾಗಿ ಗೂಂಡಾಗಿರಿ ಮಾಡುತ್ತಿದ್ದಾರೆ. ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಜಾಗದಲ್ಲಿ ಕಾನೂನು ಬಾಹಿರವಾಗಿ ಕಟ್ಟುತ್ತಿರುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್, ಮಾಜಿ ಸದಸ್ಯ ಶಿವಪ್ಪ, ಗ್ರಾಮಸ್ಥರಾದ ಜಾನಯ್ಯ, ರುದ್ರಪ್ಪ, ಚಿಕ್ಕೇಗೌಡ, ದೊಡ್ಡೇಗೌಡ ಹಾಗೂ ಇತರರು ಇದ್ದರು.