ಕೊನೆಗೂ ಆಲೂಗಡ್ಡೆಗೆ ಬೆಲೆ ಬಂತು!
ಕನ್ನಡಪ್ರಭ ವಾರ್ತೆ, ಹಾಸನ, ಮೇ 6
ಆಲೂಗಡ್ಡೆ ದರ ನಿಗದಿಯಲ್ಲಿ ಜಿಲ್ಲಾಡಳಿತ ಹಾಗೂ ಆಲೂಗಡ್ಡೆ ವರ್ತಕರು ಒಮ್ಮತಕ್ಕೆ ಬರುವ ಮೂಲಕ ಕ್ವಿಂಟಾಲ್ ಆಲೂಗಡ್ಡೆಗೆ ರು. 1900ನಿಂದ ರು. 2000 ನಿಗದಿಯಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬುಧವಾರದಿಂದ ಆಲೂಗಡ್ಡೆಯನ್ನು ಮಾರುಕಟ್ಟೆಗೆ ಬಿಡಲು ತೀರ್ಮಾನಿಸಲಾಗಿದೆ.
ಕಳೆದ ಸೋಮವಾರ ಆಲೂಗಡ್ಡೆ ದರ ನಿಗದಿ ಮಾಡಲು ಒಂದೇ ದಿನ 2 ಬಾರಿ ಸಭೆ ನಡೆಸಿದರು ಸಹ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜಿಲ್ಲಾಡಳಿತ ಸೂಚಿಸುವಂತೆ ಆಲೂಗಡ್ಡೆಯನ್ನು ಮಾರಾಟ ಮಾಡಲು ವರ್ತಕರು ಒಪ್ಪದ ಕಾರಣ ಮತ್ತೆ ಸಭೆಯು ದರವನ್ನು ನಿಗದಿ ಮಾಡುವಲ್ಲಿ ವಿಫಲವಾಗಿತ್ತು. ತಮಗೆ 2 ಸಾವಿರ ರು.ಗಿಂತ ಕಡಿಮೆ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆಲೂಗಡ್ಡೆ ವರ್ತಕರು ಪಟ್ಟು ಹಿಡಿದರು. ಆದರೆ, ಅದಕ್ಕೆ ಜಿಲ್ಲಾಧಿಕಾರಿ ಒಪ್ಪಿರಲಿಲ್ಲ.
ಪುನಃ ಸಭೆ: ಅದರಂತೆ ಸೋಮವಾರ ನಡೆದ ಸಭೆಯ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದು ನಿರ್ಧಾರವನ್ನು ಮಂಗಳವಾರ ತಿಳಿಸುವುದಾಗಿ ಅನ್ಬುಕುಮಾರ್ ಹೇಳಿದ್ದರು. ಅದರಂತೆ ಮಂಗಳವಾರ ಸಭೆ ನಡೆಸಿದ ಅವರು, ರು. 18.5ನಿಂದ ರು. 19.5ಗೆ ಆಲೂಗಡ್ಡೆ ಮಾರಾಟ ಮಾಡುವಂತೆ ವರ್ತಕರಿಗೆ ಸೂಚಿಸಿದರು. ಇದಕ್ಕೆ ಒಪ್ಪದ ವರ್ತಕರು ರು. 2 ಸಾವಿರಕ್ಕಿಂತ ಕಡಿಮೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದ್ದರು.
ಮುಕ್ತ ಮಾರುಕಟ್ಟೆಗೆ ಒತ್ತಾಯ: ವರ್ತಕರು ಪ್ರತಿ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ ರು. 2000ಕ್ಕಿಂತ ಕಡಿಮೆ ಮಾರಲು ಸಾಧ್ಯವಿಲ್ಲ. ಇದಕ್ಕಿಂತ ಕಡಿಮೆ ಮಾರಾಟ ಮಾಡಿದರೆ ವರ್ತಕರಿಗೆ ಸಿಕ್ಕಾಪಟ್ಟೆ ನಷ್ಟ ಉಂಟಾಗಲಿದೆ. ಆದ್ದರಿಂದ ನಮಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಆಲೂಗಡ್ಡೆ ವರ್ತಕರು ರೈತರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ದರವನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದ್ದರು.
ಆದರೆ, ಜಿಲ್ಲಾಧಿಕಾರಿ ಎಷ್ಟೇ ಹೇಳಿದರೂ ವರ್ತಕರು ರು. 2,000ಕ್ಕಿಂತ ಕಡಿಮೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದ ಕಾರಣಕ್ಕೆ ಕೊನೆಗೆ ರು. 1900ರಿಂದ ರು. 2000ವರೆಗೆ ಮಾರಾಟ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮದ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಹಾಗೂ ವರ್ತಕರು ಸಭೆಯಲ್ಲಿ ಇದ್ದರು.
ಕೋಪಗೊಂಡ ಡಿಸಿ
ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರು ರೈತರ ಒಳಿತಾಗಾಗಿ ತಾವು ಸೂಚಿಸಿದ ದರದಲ್ಲೇ ಆಲೂಗಡ್ಡೆ ಮಾರಬೇಕು ಎಂದು ತಾಕೀತು ಮಾಡಿದ್ದಕ್ಕೆ ಪ್ರತಿಯಾಗಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್, ನೀವು ಸೂಚಿಸಿದ ದರಕ್ಕೆ ಮಾರಾಟ ಮಾಡೋಕ್ಕೆ ಆಗೋದೆ ಇಲ್ಲ. ಈ ರೀತಿ ಬಲವಂತವಾಗಿ ಮಾರಾಟ ಮಾಡುವಂತೆ ಜಿಲ್ಲಾಡಳಿತ ಒತ್ತಡ ಏರುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ನಾವೇನು ಒತ್ತಡ ಏರುತ್ತಿಲ್ಲ. ನಮಗೂ ಮಾತನಾಡಲಿಕ್ಕೆ ಬರುತ್ತೆ. ಆದ್ದರಿಂದ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.