ಬಿಷ್ಠಮ್ಮನ ಕೆರೆಯಲ್ಲಿ ಗಂಗಾ ಕಳಸ ವಿಸರ್ಜನೆ
ಬೇಲೂರು: ಗಂಗಾ ಪರಮೇಶ್ವರಿ ಜಯಂತಿ ಅಂಗವಾಗಿ ಗಂಗಾ ಮತಸ್ಥರು ಪವಿತ್ರ ಗಂಗಾ ಕಳಸವನ್ನು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ನಂತರ ಇಲ್ಲಿನ ಐತಿಹಾಸಿಕ ಬಿಷ್ಠಮ್ಮನ ಕೆರೆಯಲ್ಲಿ ವಿಸರ್ಜನೆ ಮಾಡಿದರು.
ಮಹಾತಪಸ್ವಿ ಭಗಿರಥನು ಕೈಲಾಸ ಪರ್ವತಕ್ಕೆ ತೆರಳಿ ಪರಮೇಶ್ವರನ್ನು ಒಲಿಸಿಕೊಂಡು ಗಂಗಾ ಮಾತೆಯನ್ನು ಭೂಮಿಗೆ ಕರೆತಂದಿರುವ ಸುದಿನವನ್ನು ಗಂಗಾ ಪರಮೇಶ್ವರಿ ಜಯಂತಿಯಾಗಿ ಗಂಗಾಮತಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಇಂದು ಬೆಳಗಿನ ಜಾವ ಇಲ್ಲಿನ ಯಗಚಿ ನದಿಗೆ ತೆರಳಿ ಮಡಿಯುಟ್ಟು ಗಂಗಾಮಾತೆನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ನಂತರ ಕಳಸವನ್ನು ಹೊತ್ತ ಬಾಲಕಿಯರು ಹಾಗೂ ಗಂಗಾಮತಸ್ಥ ಕುಲಬಾಂಧವರು ಮಂಗಳವಾದ್ಯ ಸಮೇತ ಮುಖ್ಯರಸ್ತೆಲ್ಲಿ ಮೆರವಣಿಗೆ ಹೋರಡುತ್ತಾರೆ. ಬಳಿಕ ಸಕಲೇಶಪುರ ರಸ್ತೆಲ್ಲಿರುವ ಐತಿಹಾಸಿ ವಿಷ್ಣು ಸಮುದ್ರ ಕೆರೆ ( ಬಿಷ್ಠಮ್ಮನ ಕೆರೆ )ಗೆ ತೆರಳಿ ಅಲ್ಲಿ ಮತ್ತೆ ಗಂಗಾಮಾತೆಗೆ ಪೂಜೆನ್ನು ಸಲ್ಲಿಸಿ ಯಗಚಿ ನದಿಯಿಂದ ಪವಿತ್ರ ಕಳಸದಲ್ಲಿ ತಂದಿರುವ ಗಂಗೆಯನ್ನು ವಿಸರ್ಜನೆ ಮಾಡುತ್ತಾರೆ.
ಗಂಗಾಮತಸ್ಥ ಪ್ರಮುಖರಾದ ಹನುಮಂತು, ಕುಮಾರ್, ಮಂಜುನಾಥ್, ಮದು, ಪೂರ್ಣಿಮಾ, ಶೈಲಾ ಇತರರು ಪಾಲ್ಗೊಂಡಿದ್ದರು.
ಪ್ರಿಯಕರನೊಂದಿಗೆ ಓಡಿಹೋದ ವಧು
ಹೊಳೆನರಸೀಪುರ: ಮದುವೆ ನಿಶ್ಚಯವಾಗಿ ಹಸಮಣೆ ಏರಬೇಕಾಗಿದ್ದ ಯುವತಿ ಮದುವೆಗೆಂದು ಸಿದ್ಧಪಡಿಸಿದ್ದ ಹಣ ಮತ್ತು ಒಡವೆ ತೆಗೆದುಕೊಂಡು ಮತ್ತೊಬ್ಬ ಯುವಕನೊಂದಿಗೆ ರಾತ್ರೋರಾತ್ರಿ ಪರಾರಿಯಾಗಿರುವ ಪ್ರಕರಣ ಪಟ್ಟಣದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ತಾಲೂಕಿನ ಹಾಡ್ಯ ಗ್ರಾಮದ ಮಹದೇವ ಎಂಬವರ ಪುತ್ರಿ ಗಾಯಿತ್ರಿ(19) ಎಂಬ ಯುವತಿಗೆ ಮದುವೆ ನಿಶ್ಚಯಿಸಿದ್ದು, ಮೇ 8ರಂದು ಮದುವೆ ನಡೆಯಬೇಕಿತ್ತು. ಆದರೆ ಮೊದಲ ವರ್ಷದ ಬಿಎ ಓದುತ್ತಿದ್ದ ಯುವತಿ ಗಾಯತ್ರಿ ಮೇ .4ರ ರಾತ್ರಿ ಮದುವೆಗಾಗಿ ಇಟ್ಟಿದ್ದ 65 ಸಾವಿರ ಹಾಗೂ 100 ಗ್ರಾಂ. ಚಿನ್ನದ ಒಡವೆ ತೆಗೆದುಕೊಂಡು ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಮಹದೇವ ಅವರು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮಗಳು ಕಾಣೆಯಾಗಿದ್ದು, ಪಟ್ಟಣದ ಈಜುಕೊಳದಲ್ಲಿ ತರಬೇತುದಾರನಾಗಿರುವ ಪ್ರಶಾಂತ್ ಎಂಬ ಯುವಕನ ಮೇಲೆ ಅನುಮಾನವಿದೆ ಎಂದು ಯುವತಿಯ ತಂದೆಯು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಈಜುಕೊಳದಲ್ಲಿ ತರಬೇತುದಾರನಾಗಿದ್ದ ಪ್ರಶಾಂತ್ ಎಂಬ ಯುವಕ ಕೂಡ ಮೇ 4ರಂದೇ ಕಾಣೆಯಾಗಿದ್ದು, ಯುವತಿಯ ತಂದೆಯವರ ದೂರಿನ ಮೇಲೆ ಇಲ್ಲಿನ ಗ್ರಾಮಾಂತರ ಠಾಣೆಯ ಎಸ್ಐ ಲೋಕೇಶ್ ಅವರು ಯುವತಿಯ ಅಪಹರಣ ಹಾಗೂ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
12 ಜೂಜುಕೋರರ ಬಂಧನ, ನಗದು ವಶ
ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಮಟ್ಕಾ ಹಾಗೂ ಅಂದರ್ ಬಾಹರ್ ಜೂಜಾಡುತ್ತಿದ್ದ 12 ಮಂದಿಯನ್ನು ಬಂಧಿಸಿರುವ ಪೊಲೀಸರು ರು. 9640 ನಗದನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಅರಸೀಕೆರೆ ಪಟ್ಟಣದ ಲಕ್ಷ್ಮಿಪುರ ಬಡಾವಣೆ ನಿತ್ಯಾನಂದ ಕಾಫಿಬಾರ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದ ಇಬ್ಬರನ್ನು ಅರಸೀಕೆರೆ ಉಪ-ವಿಭಾಗದ ಡಿವೈಎಸ್ಪಿ ಐ.ಜಿ. ಮಂಜುನಾಥ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ. ರು. 1 ರೂಪಾಯಿಗೆ ರು. 80 ಕೊಡುವುದಾಗಿ ಮಟ್ಕಾ ಬರೆಯುತ್ತಿದ್ದ ರಮೇಶ, ಗಿರೀಶ ಎಂಬುವರನ್ನು ಬಂಧಿಸಿ, ರು. 2135 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ಪಟ್ಟಣದ ಸಾಯಿನಾಥ ರಸ್ತೆಯ ಸ್ವಪ್ನ ಸ್ವೀಟ್ ಸ್ಟಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದ ಶಿವಣ್ಣ, ಚೇತನ ಎಂಬವರನ್ನು ಬಂಧಿಸಿ ಅವರಿಂದಲೂ ರು. 2215 ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹಾಸನ ತಾಲೂಕು ದೊಡ್ಡಭಾಗನಹಳ್ಳಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಮೈದಾನದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಗ್ರಾಮಾಂತರ ಠಾಣೆಯ ಪಿಎಸ್ಐ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.ಕುಮಾರ, ರಂಗಯ್ಯ, ಮೈಲಾರಯ್ಯ, ಅಮಾಸೆ ಎಂಬವರೇ ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 500 ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣ: ಹಾಸನ ನಗರ ರವೀಂದ್ರನಗರ ಪಾರ್ಕ್ ಹತ್ತಿರ ಅಂದರ್ ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಆರೋಪಿಗಳನ್ನು ಬಡಾವಣೆ ಠಾಣೆ ಪಿಎಸ್ಐ ನರೇಂದ್ರಕುಮಾರ್ ಅವರು ಸಿಬ್ಬಂದಿ ಬಂಧಿಸಿದ್ದಾರೆ.
ಪುಟ್ಟೇಗೌಡ, ಪಾಪು, ಧರ್ಮೇಶ್, ನಿಸಾರ್ ಎಂಬುವರನ್ನು ಬಂಧಿಸಿರುವ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 4800 ನಗದನ್ನು ವಶಪಡಿಸಿಕೊಂಡಿದ್ದಾರೆ.
'ದೈಹಿಕ ಆರೋಗ್ಯಕ್ಕೆ ಕರಾಟೆ ಅಗತ್ಯ'
ಆಲೂರು: ಇಂದಿನ ದಿನಗಳಲ್ಲಿ ಆತ್ಮ ರಕ್ಷಣೆಯ ಜತೆಗೆ ದೈಹಿಕವಾಗಿ ಆರೋಗ್ಯದಿಂದಿರಲು ಕರಾಟೆ ಬಹಳ ಅಗತ್ಯವಾಗಿದೆಯೆಂದು ಡಾ. ಜಯರಾಜ್ ಹೇಳಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಫೈನ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ನೀಲೇಶ್ ಮಾತನಾಡಿ, ಹೆಣ್ಣುಮಕ್ಕಳಿಗೆ ಇದು ಹೆಚ್ಚು ಉಪಯೋಗವಾಗಲಿದೆ. ಅಲ್ಲದೇ, ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ರಕ್ಷಣೆಗೆ ಸಹಕಾರಿಯಾಗಲಿದೆ. ಇದನ್ನು ಎಲ್ಲರೂ ಕಲಿಯಬೇಕು ಎಂದರು. ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ವೀರ ಕನ್ನಡಿಗ ಟಿಪ್ಪು ಸೇನೆಯ ತಾಲೂಕು ಅಧ್ಯಕ್ಷ ಕಬೀರ್, ಜಿ.ಕೆ. ವೆಂಕಟೇಶ್, ತೌಖಿರ್ ಅಹಮದ್ ಇತರರು ಇದ್ದರು.
ಮನ ಪರಿವರ್ತನೆಗೆ ದೇವರ ಧ್ಯಾನ ಮಾಡಿ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ದಿನ 10 ನಿಮಿಷ ದೇವರ ಧ್ಯಾನ ಮಾಡಿ ಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಇಲ್ಲಿಗೆ ಸಮೀಪದ ಬೆಳಗುಲಿಯಲ್ಲಿ ಸೋಮವಾರ ಕೆಂಚಮ್ಮ ದೇವಾಲಯದ ವಿಗ್ರಹ ಪ್ರತಿಷ್ಥಾಪನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವಾಲಯಕ್ಕೆ 300 ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆ, ರು. 10 ಲಕ್ಷ ವೆಚ್ಚದ ಸಮುದಾಯ ಭವನ ಮಾಡಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕ ಮೇಲಗಿರಿಗೌಡ ಮುಖಂಡರಾದ ಜಯಲಿಂಗೇಗೌಡ, ವಿಕ್ಟರ್, ಕೆಂಪಯ್ಯ, ಪುಟ್ಟಸ್ವಾಮಿ, ಮಂಜಣ್ಣ, ಚೆನ್ನಯ್ಯ, ಶೇಕರ್, ಲೋಕೇಶ್ ಮತ್ತಿತರರು ಇದ್ದರು.
'ಪ್ರಯತ್ನದಿಂದ ಯಶಸ್ಸು ಸಾಧ್ಯ'
ಹಾಸನ: ಜಾತಿ, ಮತ, ಧರ್ಮದಿಂದ ಯಶಸ್ಸು ಸಾಧ್ಯವಿಲ್ಲ. ಜ್ಞಾನದಿಂದ ಮತ್ತು ದೃಢವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಅಭಿಪ್ರಾಯಿಸಿದರು. ಸೋಮವಾರ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
3 ಸೂತ್ರಗಳು ಪ್ರಮುಖ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ, ಅದಕ್ಕೆ ಸಂಬಂಧಿಸಿದಂತೆ ಸಾಮಾಗ್ರಿಗಳ ಸಂಗ್ರಹಣೆ ಮತ್ತು ಮಾರ್ಗದರ್ಶನ ಅವಶ್ಯಕ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಆಳವಾದ ಅಧ್ಯಯನ, ಅಮಿತವಾದ ಆಸಕ್ತಿ, ಪುನರಾವರ್ತನೆ - ಈ 3 ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯ ಎಂದರು.
ಜ್ಞಾನದಾಹಿಗಳಾಗಿ: ಕಾಲೇಜಿನ ಸಹ ಪ್ರಾದ್ಯಾಪಕ ಡಾ. ಎಂ.ಕೆ. ದೇವಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸ್ನಾತಕೋತ್ತರ ಪದವಿ ಪಡೆದ ನಂತರ ವಿದ್ಯಾಭ್ಯಾಸ ಮುಗಿದಿದೆ ಎಂಬ ಭಾವನೆ ಕಿತ್ತೊಗೆದು ತಮ್ಮ ಗುರುಗಳನ್ನು ಮೀರಿಸುವಂಥ ಜ್ಞಾನ ಪಡೆಯುವತ್ತ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಏನು ಬೇಕಾದರೂ ಸಾಧಿಸಬಹುದು ಎಂದರು.
ಸ್ನಾತಕೋತ್ತರ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ.ಎಂ.ಕೆ. ದೇವಪ್ಪ, ವನಿತಾ.ಡಿ ಮತ್ತು ಪ್ರೊ. ಮನ್ಸೂರ್ ಪಾಷಾ, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಯತೀಶ್ ಕೆ.ಎನ್, ಯೋಗೇಶ .ಎ.ಜಿ, ಸಂತೋಷ್ ಎಸ್.ಎ, ಸುನೀಲ್ ಕುಮಾರ್ ಇದ್ದರು.