ಅಕ್ರಮ ಅಕ್ಕಿ ಸಾಗಣೆ: ಲಾರಿ ಜೊತೆ ವ್ಯಕ್ತಿ ವಶ
ಹಾಸನ: ವ್ಯಕ್ತಿಯೊಬ್ಬ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಲಾರಿ ಸಮೇತ ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ. ನಗರದ ಹೊಸಲೈನ್ ರಸ್ತೆಯ ಮಹಮ್ಮದ್ ಕಲೀಂ ಪಾಷ ಎಂಬಾತ ತಮ್ಮ ಅಂಗಡಿಯಲ್ಲಿ ಇದ್ದ ಅನ್ನಭಾಗ್ಯ ಅಕ್ಕಿಯನ್ನು ಮಂಗಳವಾರ ರಾತ್ರಿ ಲಾರಿಗೆ ತುಂಬುತ್ತಿದ್ದ ಸಂದರ್ಭದಲ್ಲಿ ನಗರದ ಪೆನ್ಷ್ನ್ ಮೊಹಲ್ಲಾ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 90 ಕ್ವಿಂಟಲ್ ಅಕ್ಕಿ ಹಾಗೂ ಒಂದು ಲಾರಿ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ಮಾಡುವ ಸಂದರ್ಭದಲ್ಲಿ 107 ಚೀಲ ಅಕ್ಕಿಯನ್ನು ಲಾರಿಗೆ ತುಂಬಿಸಲಾಗಿತ್ತು. ತಪಾಸಣೆ ನಡೆಸಿದಾಗ ಅಂಗಡಿಯ ಗೋದಾಮಿನಲ್ಲಿ 79 ಚೀಲ ಅಕ್ಕಿ ಪತ್ತೆಯಾಯಿತು. ಚೀಲದ ಮೇಲೆ ನಂದಿ ಬ್ಯ್ರಾಂಡ್ ಅಕ್ಕಿ ಎಂದು ಮುದ್ರಿಸಲಾಗಿದ್ದರೂ ಒಳಗಿದ್ದ ಅಕ್ಕಿ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯನ್ನು ಮಾದರಿಯ ರೀತಿಯಲ್ಲಿ ಇರುವುದು ಕಂಡ ಬಂದ ಕಾರಣ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಈ ಅಕ್ಕಿಯನ್ನು ಎಪಿಎಂಸಿಯಲ್ಲಿ ಖರೀದಿ ಮಾಡಿರುವುದಾಗಿ ರಸೀತಿ ನೀಡಿದ್ದಾರೆ. ಆದರೆ ಅಕ್ಕಿ ಚೀಲದೊಳಗಿನ ಅಕ್ಕಿ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯ ಮಾದರಿಯಲ್ಲಿ ಇರುವುದರಿಂದ ವಿಚಾರಣೆ ಕೈಗೊಂಡಿರುವುದಾಗಿ ಆಹಾರ ಸರಬರಾಜು ಇಲಾಖೆ ಹೇಳುತ್ತಿದ್ದಾರೆ.
ಕೊಂಬೆ ಮುರಿದು ಬಿದ್ದು ವ್ಯಕ್ತಿ ಸಾವು
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಹಾನಗಲ್ಲು ಗ್ರಾಮದಲ್ಲಿ ಮಂಗಳವಾರ ಸಂಜೆ 3.30ರ ಸಮಯದಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ಮರದ ಕೊಂಬೆ ಮುರಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಹಾನುಗಲ್ಲು ಗ್ರಾಮದ ರಾಮಶೇಷಯ್ಯ ಎಂಬುವವರ ಪುತ್ರ ಶೇಷಾದ್ರಿ(48). ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರಗೆ ಕರೆದೊಯ್ಯಲಾಯಿತಾದರೂ ಫಲಕಾರಿಯಾಗಿಲ್ಲ.
ಹಾಸನ ಪುಂಡಾನೆಗಳಿಗೆ ಸಕ್ರೆಬೈಲಿನಲ್ಲಿ ಪಾಠ
ಶಿವಮೊಗ್ಗ: ಹಾಸನ ಭಾಗದಲ್ಲಿ ಜನರನ್ನು ಗೋಳುಹೊಯ್ದುಕೊಂಡ ನಾಲ್ಕು ಪುಂಡಾನೆಗಳ ಪಳಗಿಸುವ ಕಾರ್ಯ ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರದಲ್ಲಿ ಆರಂಭವಾಗಿದೆ. ಎರಡು ದೊಡ್ಡ ಗಂಡಾನೆ ಮತ್ತು ಎರಡು ಮರಿ ಹೆಣ್ಣಾನೆಗಳನ್ನು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಆನೆ ಬಿಡಾರಕ್ಕೆ ತರಲಾಯಿತು. ಹಾಸನ ಭಾಗದಲ್ಲಿ ಹಾನಿ ಮಾಡುತ್ತಿರುವ ಕಾಡಾನೆಗಳನ್ನು ಗುರುತಿಸಿ ಅವುಗಳನ್ನು ಪಳಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಯಿತು. ವಿಶೇಷ ತಂಡ ರಚನೆ ಮಾಡಿದ ಅರಣ್ಯ ಇಲಾಖೆ ಹಾಸನ ಭಾಗದಲ್ಲಿ ನಾಲ್ಕು ಆನೆಗಳನ್ನು ಹಿಡಿಸುವಲ್ಲಿ ಸಫಲವಾಗಿತ್ತು. ಹಿಡಿದ ಆನೆಗಳನ್ನು ಮತ್ತೆ ಬೇರೆಡೆ ಸ್ಥಳಾಂತರಿಸುವ ಬದಲಾಗಿ ಅವುಗಳನ್ನು ಪಳಗಿಸಿ ಇಲಾಖೆ ಆನೆಗಳಾಗಿ ಪರಿವರ್ತಿಸುವ ಉದ್ದೇಶದಿಂದ ಶಿವಮೊಗ್ಗದ ಸಕ್ರೈಬೈಲ್ ಆನೆ ಬಿಡಾರ ಸೇರಿದಂತೆ ರಾಜ್ಯದ ಇತರೆ ಆನೆ ಬಿಡಾರಗಳಾದ ದುಬಾರೆ, ಮತ್ತಿಗೋಡಿನಲ್ಲಿ ಪೂರ್ವತಯಾರಿ ಫೆಬ್ರವರಿಯಲ್ಲೇ ನಡೆದಿತ್ತು. ಆನೆಗಳನ್ನು ಪಳಗಿಸಲು ಸದ್ಯ ಇರುವುದು ಕಾವಾಡಿಗಳದ್ದೇ ಟೆಕ್ನಾಲಜಿ. ಒಂದೇ ಅಳತೆಯ ದೊಡ್ಡ ಗಾತ್ರದ ಮರಗಳಿಂದ ದೊಡ್ಡಿಯನ್ನು ನಿರ್ಮಿಸಿ ಅದರಲ್ಲಿ ಪುಂಡಾನೆಗಳನ್ನು ಕಟ್ಟಿ ಅವುಗಳ ಆಕ್ರೋಶ ತಗ್ಗಿಸಲಾಗುತ್ತದೆ. ಸದ್ಯ ಸಕ್ರೆಬೈಲ್ ನಲ್ಲಿ ಕ್ರಾಲ್ ಗಳನ್ನು (ಆನೆ ಪಳಗಿಸುವ ದೊಡ್ಡಿ) ನಿರ್ಮಿಸಲಾಗಿದೆ. ಒಟ್ಟಾರೆ ನಾಲ್ಕು ಕ್ರಾಲಲ್ಗಳು ಇಲ್ಲಿವೆ. ಸುಮಾರು 6ರಿಂದ 8 ಅಡಿ ಆಳದ ಕುಳಿ ತೆಗೆದು ಅದರಲ್ಲಿ ನೀಲಗಿರಿ ಮರದ ದಿಮ್ಮಿಗಳನ್ನು ನಿಲ್ಲಿಸಲಾಗಿದೆ. ಅದರ ಆಧಾರವನ್ನಿಟ್ಟುಕೊಂಡು ಸುತ್ತಲೂ ನೀಲಗಿರಿ ಮರಗಳನ್ನು ನಿಲ್ಲಿಸಲಾಗಿದೆ. ನೆಲಕ್ಕೂ ಸಹ ಮರಗಳನ್ನೇ ಸಾಲಾಗಿ ಜೋಡಿಸಲಾಗಿದೆ. ಲಾರಿಗಳಲ್ಲಿ ಬಂದ ಆನೆಗಳನ್ನು ಬಿಡಾರದ ಎರಡು ಆನೆಗಳ ಸಹಕಾರದಿಂದ ಕ್ರಾಲ್ ಒಳಗೆ ತಳ್ಳಲಾಯಿತು. ಆರಂಭದಲ್ಲಿ ಆನೆ ಸುಲಭವಾಗಿ ಓಡಾಡದಷ್ಟು ಬಿಗಿಯಾಗಿ ಕೂಡಲಾಗುತ್ತದೆ. ನಂತರ ಬಿಗಿ ಸಡಿಲಗೊಳಿಸಲಾಗುತ್ತದೆ ಎಂದು ಹಿರಿಯ ಕಾವಡಿ ತಿಳಿಸಿದರು.