ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಚಾಟಿ ಬೀಸುವ ಶಕ್ತಿ ಇದೆ
ಹಾಸನ: ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಹಾಸನ ಲೋಕಸಭಾ ಅಭ್ಯರ್ಥಿ ವಿಜಯಶಂಕರ್, ಜಿಲ್ಲೆ ಅಭಿವೃದ್ಧಿ ಬಗ್ಗೆ ಯಾರಾದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದರೇ ಅಂತವರಿಗೆ ಚಾಟಿ ಏಟು ನೀಡಿ ಕೆಲಸ ಮಾಡಿಸುವ ಶಕ್ತಿ ನಮಗಿದೆ ಎಂದರು.
ಜಿಲ್ಲೆಯ ಯಾವ ಭಾಗದಲ್ಲಿ ಸಮಸ್ಯೆ ಕಂಡು ಬಂದರೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ವಿಚಾರಣೆ ಮಾಡಿ ಸರಿಪಡಿಸುವ ಕೆಲಸ ಆಗಬೇಕು. ನಿರ್ಲಕ್ಷ್ಯ ಭಾವನೆ ಮಾಡಿದರೇ ಅಂತವರಿಗೆ ಚಾಟಿ ಏಟು ನೀಡುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ ಎಂದು ವಂಚನೆ ಮಾಡುವ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ ಅವರು, ಜಿಲ್ಲೆಯ ಅಭಿವೃದ್ಧಿ ಹಿಂದೆ ಬೀಳುವುದನ್ನು ನಾನು ನಿಲ್ಲಿಸುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಾರಿ ವಂಚನೆಯನ್ನು ಜಿಲ್ಲೆಯಲ್ಲಿ ನಾವು ಕಾಣುತ್ತಿದ್ದು, ಶಾಶ್ವತ ಕುಡಿಯುವ ನೀರು ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನೆ ಬರಲಿ ಅದನ್ನು ಸಮರ್ಥವಾಗಿ ಎದುರಿಸುವುದಾಗಿ ಹೇಳಿದರು.
ಜೀವನದಲ್ಲಿ ಮರೆಯಲಾಗದ ಋಣ ಹಾಗೂ ಅನುಭವ, ಅಪೂರೂಪದ ಕ್ಷಣ ಈ ಲೋಕಸಭಾ ಚುನಾವಣೆಯಲ್ಲಿ ಆಗಿದೆ. ಈ ಜಿಲ್ಲೆಗೆ ನಾನು ಅಭ್ಯರ್ಥಿಯಾಗಿ ಬಂದಾಗ ಕಾರ್ಯಕರ್ತರು ಹಾಗೂ ಜನತೆ ತೋರಿಸಿದ ಪ್ರೀತಿ ವಿಶ್ವಾಸ ನಾನು ಎಂದು ಮರೆಯುವುದಿಲ್ಲ. ಪಕ್ಷದ ಸಂಘಟನೆ ಮತ್ತು ಮತದಾರರ ಋಣ ತೀರಿಸಲು ಸಾಧ್ಯವಿಲ್ಲ. ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟು ಮತ್ತು ಶಕ್ತಿ ಇದೆ. ಇನ್ನು ನೂರು ಪಟ್ಟು ಹೆಚ್ಚಾಗಬೇಕು ಎಂದರು.
ಪಕ್ಷದ ಕಾರ್ಯಕರ್ತರ ಒಗ್ಗಟ್ಟಿನಿಂದ ಮುಂದಿನ ಜಿಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿರುತ್ತದೆ. ಹಳ್ಳಿ-ಹಳ್ಳಿಗೆ ತೆರಳಿ ಜನರಿಗೆ ಮುಟ್ಟಿಸಲಾಗುವುದು. ಮುಂದೆ ನಡೆಯುವ ಎಲ್ಲಾ ಚುನಾವಣೆಯಲ್ಲೂ ಪಕ್ಷ ಮೊದಲು ಆಗಿರುತ್ತದೆ ಎಂದು ಭರವಸೆ ನೀಡಿದರು.
ನಮ್ಮ ರಾಮಪಡೆ ಸೇತುವೇ ಈಗಾಗಲೇ ಲಂಕೆಯನ್ನು ಯಶಸ್ವಿಯಾಗಿ ತಲುಪಿದೆ. ಸೀತೆ ಅಪಹರಣದಂತೆ ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗಬೇಕು. ಭರವಸೆ ಇದೆ ನಮ್ಮ ಬಿಜೆಪಿ ಪಕ್ಷ ಜಯಶಾಲಿಯಾಗುತ್ತದೆ. ಜನತೆಗೆ ಭರವಸೆ ನೀಡಿದ ಮಾತುಗಳನ್ನು ಈಡೇರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮರಡಿ ಸೋಮಶೇಖರ್, ನಿರ್ವಾಹಣೆಗೌಡ, ಮಾಜಿ ಶಾಸಕ ಬಸವರಾಜ್, ರವಿ, ಪ್ರಸನ್ನಕುಮಾರ್, ಯುವ ಮೋರ್ಚಾಜಿಲ್ಲಾಧ್ಯಕ್ಷ ಚನ್ನಕೇಶವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ನಾಗೇಶ್, ನಿರ್ಮಲ್ ಕುಮಾರ್ ಸುರನ್, ವಿಜಯಕುಮಾರ್, ಶ್ರೀನಿವಾಸ್ ಇದ್ದರು.