ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀತಿ ಸಂಹಿತೆ ನಂತರ ಮಾರುಕಟ್ಟೆ ಸ್ಥಳಾಂತರ?

Rashmi Kasaragodu
Updated On : 8 May 2014, 1:12 am

 ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಶಾಶ್ವತ ನೆಲೆಯೇ ಇಲ್ಲದೇ ದಶಕಗಳಿಂದಲೂ ಬೀದಿ ಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿರುವ ಇಲ್ಲಿನ  ಬೀದಿ ಬದಿಯ ವ್ಯಾಪಾರಿಗಳು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ತೆರವುಗೊಂಡ ಬಳಿಕ ಈಗಿರುವ ಸ್ಥಳದಿಂದ ಎತ್ತಂಗಡಿಯಾಗುವ ವದಂತಿಯಿಂದಾಗಿ ಬೀದಿಗೆ ಬೀಳುವ ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದ ಹಣ್ಣು, ಹೂವು, ತರಕಾರಿ ಮೊದಲಾದ ವ್ಯಾಪಾರಕ್ಕೆ ಇಲ್ಲಿನ ಪುರಸಭೆ ಸೂಕ್ತ ಹಾಗೂ ಶಾಶ್ವತ ಸ್ಥಳವನ್ನು ನಿಗದಿಗೊಳಿಸದ ಕಾರಣದಿಂದಾಗಿ ಹಿಂದಿನಿಂದಲೂ ಇಲ್ಲಿನ ಕೆಲವು ರಸ್ತೆಗಳ ಬದಿಯಲ್ಲಿ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ಇಲ್ಲಿನ ಬೀದಿ ಬದಿಯ ವ್ಯಾಪಾರಿಗಳನ್ನು ರಸ್ತೆ ಸುರಕ್ಷತೆ ಹಾಗೂ ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದಾಗಿ ಸ್ಥಳಾಂತರಿಸುವ ಕುರಿತಂತೆ ಪುರಸಭೆಯಲ್ಲಿ ಹಲವಾರು ಬಾರಿ ಚರ್ಚೆಗಳು ನಡೆದಿದ್ದರೂ, ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನಿಗದಿಗೊಳಿಸುವಲ್ಲಿ ವಿಫಲವಾಗಿರುವ ತನ್ನದೇ ಹೊಣೆಗೇಡಿತನದಿಂದ ಇಲ್ಲಿನ ಪುರಸಭೆ ಮಾರುಕಟ್ಟೆ ಸ್ಥಳಾಂತರವನ್ನು ಮುಂದೂಡುತ್ತಲೇ ಬಂದಿತ್ತು.
ಪ್ರತೀ ವರ್ಷ ಕೋಳಿ, ಮೀನು, ಮಾಂಸದ ಅಂಗಡಿ, ವಾರದ ಸಂತೆ ಹಾಗೂ ದಿನವಹಿ ಮಾರುಕಟ್ಟೆಯಲ್ಲಿ ತೆರಿಗೆ ಸಂಗ್ರಹಿಸಲು ಪುರಸಭೆಯು ಹರಾಜಿನಲ್ಲಿ ಸುಂಕ ವಸೂಲಿ ಮಾಡುವ ಹಕ್ಕನ್ನು ಅಖೈರುಗೊಳಿಸುತ್ತಲೇ ಬಂದಿದೆ. ಆದರೆ ಎಲ್ಲ ಬಾಬ್ತುಗಳಿಂದಲೂ ವಸೂಲಿ ಮಾಡುವ ಸುಂಕಕ್ಕೆ ಪ್ರತಿಯಾಗಿ ಅವಶ್ಯಕವಾದ ಸವಲತ್ತು ಕಲ್ಪಿಸಿಕೊಡುವಲ್ಲಿ ಕ್ರಮ ಕೈಗೊಳ್ಳದ ಪುರಸಭೆಯ ಜಾಣಕುರುಡು ನೀತಿಯಿಂದಾಗಿ ಸುಂಕ ಕಟ್ಟುವ ಬೀದಿ ಬದಿಯ ವ್ಯಾಪಾರಿಗಳು ಕನಿಷ್ಠ ಸವಲತ್ತುಗಳು ಇಲ್ಲದೇ, ಜೀವನ ನಿರ್ವಹಣೆಗಾಗಿ ಬೀದಿ ಬದಿಯಲ್ಲಿಯೇ ದಶಕಗಳಿಂದಲೂ ವ್ಯಾಪಾರ ನಡೆಸುತ್ತಿದ್ದಾರೆ.
ಪಟ್ಟಣದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಮನಸ್ಸು ಮಾಡದ ಕಾರಣದಿಂದಾಗಿ, ಹತ್ತು ಹಲವು ವರ್ಷಗಳಿಂದಲೂ ಇಲ್ಲಿನ ಬೀದಿ ಬದಿಯ ವ್ಯಾಪಾರಿಗಳು ಶಾಶ್ವತ ನೆಲೆ ಕಲ್ಪಿಸಿಕೊಡುವಂತೆ ಜನಪ್ರತಿನಿಧಿಗಳ ಬಳಿ ಕೈಮುಗಿದು ಮಾಡಿದ ಮನವಿಗೆ ಸೂಕ್ತ ಸ್ಪಂದನೆ ಇದುವರೆವಿಗೂ ದೊರೆತಿಲ್ಲ.
ರಸ್ತೆಗೆ ಡಾಂಬರು ಹಾಕುವ ಕಾಮಗಾರಿಯ ನೆಪದಲ್ಲಿ ಸ್ಥಳಾಂತರಿಸಲಾಗುವುದು ಎನ್ನುವ ವದಂತಿ ಹಿನ್ನೆಲೆಯಲ್ಲಿ ಬೀದಿಯಲ್ಲಿರುವ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಭವಿಷ್ಯದ ಬದುಕು ಮತ್ತೆ ಬೀದಿಯಿಂದ ಇನ್ನೆಲ್ಲಿಗೆ ಬೀಳುವುದೋ ಎನ್ನುವ ಆತಂಕದಲ್ಲಿದ್ದಾರೆ. ಪಟ್ಟಣದಲ್ಲಿ ಈಗಿರುವ ತರಕಾರಿ ಮಾರುಕಟ್ಟೆಯನ್ನು ಕೋಟೆ ರಸ್ತೆಯ ಕವರ್ ಡೆಕ್ ಬಳಿಗೆ ಸ್ಥಳಾಂತರಿಸಲಾಗುವುದು ಎನ್ನುವ ವದಂತಿ ಹರಿದಾಡುತ್ತಿದ್ದು, ಒಂದು ವೇಳೆ ಸ್ಥಳಾಂತರಗೊಂಡರೆ ಅಲ್ಲಿಯಾದರೂ ಕನಿಷ್ಠ ಸೌಲಭ್ಯ ಕಲ್ಪಿಸದ ಪುರಸಭೆಯ ಉದಾಸೀನ ನೀತಿ ಬೀದಿ ಬದಿಯ ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗಲಿದೆ.
 ಪಟ್ಟಣದಲ್ಲಿ ಕೋಟಿಗಟ್ಟಳೆ ಅನುದಾನದಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಮುದಾಯ ಭವನಗಳು, ಕಾಂಕ್ರಿಟ್ ರಸ್ತೆಗಳು, ಕಂಡ ಕಂಡಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಿಸುವಲ್ಲಿ ಕಾಳಜಿ ಹೊಂದಿರುವ ಇಲ್ಲಿನ ಶಾಸಕ ಎಚ್.ಡಿ. ರೇವಣ್ಣ ಅವರಿಗಾಗಲೀ, ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ನಂತರ ಪ್ರಧಾನಮಂತ್ರಿಯ ಹುದ್ದೆಯನ್ನೂ ಅಲಂಕರಿಸಿ ಮಾಜಿಗಳಾಗಿರುವ ಎಚ್.ಡಿ.ದೇವೇಗೌಡರಿಗಾಗಲೀ ತಮ್ಮ ಹುಟ್ಟೂರಿನ ಬೀದಿ ಬದಿಯ ವ್ಯಾಪಾರಿಗಳ ದಶಕಗಳ ನೋವಿನ ಕೂಗು ಇನ್ನೂ ಕೇಳಿಸಿಲ್ಲವೇಕೆ ಎಂಬುದು ಇಲ್ಲಿನ ಬಡ ವ್ಯಾಪಾರಿಗಳ ಪ್ರಶ್ನೆಯಾಗಿದೆ.
ಅನುದಾನ ಹಾಗೂ ಅವಕಾಶಗಳಿದ್ದೂ ಜೊತೆಗೆ ಸೂಕ್ತ ಸ್ಥಳವಿದ್ದೂ ಮಾರುಕಟ್ಟೆಗಾಗಿ ಸೂಕ್ತ ಹಾಗೂ ಶಾಶ್ವತ ನೆಲೆ ನಿರ್ಮಿಸಿಕೊಡುವಲ್ಲಿನ ಪುರಸಭೆಯ ಹಾಗೂ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಕಾರಣವೇನು ಎಂಬುದನ್ನು ಅರಿಯಲಾಗದೆ, ತುತ್ತಿನ ಚೀಲ ತುಂಬಿಸಲು ಇಲ್ಲಿನ ಬೀದಿ ಬದಿ ವ್ಯಾಪಾರಿಗಳು ತಮ್ಮ ಹಣೆಬರಹಕ್ಕೆ ಹೊಣೆ ಯಾರು ಎಂದುಕೊಂಡು ಬೀದಿಯಲ್ಲಿಯೇ ಕುಳಿತಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement