ಬಸ್ ಸೌಕರ್ಯ ಒದಗಿಸಲು ಆಗ್ರಹ
ಅರಕಲಗೂಡು: ತಾಲೂಕಿನ ಕೊಣನೂರಿನಿಂದ ಗೋರಿ-ಮುಂಡಗೋಡು ಮಾರ್ಗವಾಗಿ ಅರಕಲಗೂಡಿಗೆ ಬಸ್ ಸಂಚಾರ ಆರಂಭಿಸದಿದ್ದರೆ ಹೋರಾಟವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸಬೇಕಾಗುತ್ತದೆ ಎಂದು ಕರವೇ ಯುವ ಘಟಕದ ಅಧ್ಯಕ್ಷ ಎಂ.ಬಿ. ಸೋಮಶೇಖರ್ ಎಚ್ಚರಿಸಿದ್ದಾರೆ. ಹಲವು ವರ್ಷಗಳಿಂದ ಇದ್ದ ಬಸ್ ಸಂಚಾರವನ್ನು ಕಳೆದ ಮೂರು ತಿಂಗಳಿಂದ ನಿಲ್ಲಿಸಲಾಗಿದೆ.
ಇದರಿಂದ ಗ್ರಾಮೀಣ ಜನತೆಗೆ ತೊಂದರೆಯಾಗಿದೆ. ಈ ಕುರಿತು ಅರಕಲಗೂಡು ಡಿಪೋ ಮ್ಯಾನೇಜರ್ ಸ್ಪಂದಿಸದಿದ್ದಾಗ, ಪ್ರತಿಭಟನೆ ನಡೆಸಲಾಗಿತ್ತು. ಆದರೆ ಈ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೆರಡು ದಿನದಲ್ಲಿ ಬಸ್ ಸಂಚಾರ ಆರಂಭಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.