ಅರಸೀಕೆರೆ ರೈತರಲ್ಲಿ ಮಂದಹಾಸ
ಅರಸೀಕೆರೆ: ಬಿಸಿಲಿನ ಬೇಗೆಯಿಂದ ತತ್ತರಿಸಿ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ ತಾಲ್ಲೂಕಿನ ಜನತೆಗೆ ಗುರುವಾರ ಮಧ್ಯಾಹ್ನದಿಂದ ವರುಣ ಕೃಪೆ ತೋರಿದ ಹಿನ್ನೆಲೆಯಲ್ಲಿ ರೈತನ ಮೊಗದಲ್ಲಿ ಸಂತಸ ಮನೆಮಾಡಿತು. ಪಟ್ಟಣದಲ್ಲಿ ಕೊಂಚ ತಂಪಾದ ಅನುಭವ ಕಂಡುಬಂತು. ಕಳೆದ 10 ತಿಂಗಳಿಂದ ಮಳೆಯ ಮುಖವನ್ನೇ ನೋಡದೆ ಬೆಳೆ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸಿ ಜಾನುವಾರುಗಳ ಮೇವು ಮತ್ತು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಳೆದ ಒಂದು ವಾರದ ಹಿಂದೆ ತಾಲ್ಲೂಕಿನ ಕಣಕಟ್ಟೆ, ಬಾಣಾವರ ಹಾಗೂ ಜಾವಗಲ್ನ ಕೆಲ ಹಳ್ಳಿಗಳ ಸುತ್ತಮುತ್ತ ಸುರಿದ ಮಳೆ ರೈತರಲ್ಲಿ ಆಶಾದಾಯಕ ವಾತಾವರಣ ಸೃಷ್ಟಿಸಿತ್ತು.
ರೈತನಿಗೆ ಕೆಲಸ:ಇದೀಗ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಗುರುವಾರ 12 ಗಂಟೆಯಿಂದಲೇ ತುಂತುರು ಮಳೆ ಬೀಳಲು ಆರಂಭಿಸಿ 12.30ರ ವೇಳೆಗೆ ಬಿರುಸು ಪಡೆದುಕೊಂಡಿತು. ಇದರಿಂದಾಗಿ ಮಳೆ ಬಾರದೆ ಬಿತ್ತನೆಗೆ ಮುಗಿಲನ್ನೇ ನೋಡುತ್ತಿದ್ದ ರೈತನಿಗೆ ಕೊಂಚ ಕೆಲಸ ದೊರೆತಂತಾಗಿದೆ.
ಮಳೆ ಸುರಿಯುತ್ತಿದ್ದ ವೇಳೆ ಪಾದಚಾರಿಗಳು ಛತ್ರಿಗಳನ್ನಾಶ್ರಯಿಸಿದರೆ, ಮತ್ತೆ ಕೆಲವರು ಅಂಗಡಿ, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.