ಆರೋಗ್ಯ ಕೇಂದ್ರ ನೀಡಲು ಮೀನಮೇಷ
ಎ. ರಾಘವೇಂದ್ರ ಹೊಳ್ಳ
ಬೇಲೂರು: ಹೆಬ್ಬಾಳು ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಸಂಬಂಧಪಟ್ಟವರು ಮೀನ- ಮೇಷ ಎಣಿಸುತ್ತಿದ್ದು, ಕೂಡಲೇ ಪ್ರಾಥಮಿಕ ಆೋರಗ್ಯ ಕೇಂದ್ರವನ್ನು ನಿರ್ಮಿಸುವಂತೆ ಗ್ರಾಮಸ್ಥರು, ಇತರೆ ಸಂಘಟನೆಗಳ ಒಕ್ಕೊರಲ ಆಗ್ರಹವಾಗಿದೆ.
ತಾಲೂಕು ಕೇಂದ್ರದಿಂದಎಂಟು ಕಿ.ಮೀ ದೂರದಲ್ಲಿ ಇರುವ ಹೆಬ್ಬಾಳು ಗ್ರಾಮವು ವಾಣಿಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್, ಹಾಲು ಉತ್ಪಾದಕರ ಸಂಘ, ಪಶು ಚಿಕಿತ್ಸಾಲಯ, ಗ್ರಾಮ ಪಂಚಾಯಿತಿ, ಕಿರಿಯ ಹಿರಿಯ ಹಾಗೂ ಪ್ರೌಢಶಾಲೆ ಹಾಗೂ ಎಎನ್ಎಂ ಉಪ ಆರೋಗ್ಯ ಕೇಂದ್ರವನ್ನು ಹೊಂದಿದೆ.
ಸುಮಾರು 5500 ಜನ ಸಂಖ್ಯೆ ಹೊಂದಿದೆ. ಹೆಬ್ಬಾಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರುವ ದೊಡ್ಡಬ್ಯಾಡಿಗೆರೆ, ತಿಮ್ಮನಹಳ್ಳಿ, ಮಲ್ಲನಹಳ್ಳಿ, ಮುತ್ತುಗನ್ನೆ, ಮುತ್ತುಗನ್ನೆಕಾಲೋನಿ, ಜೋಗಿಹಳ್ಳಿ, ಶಿವಾಲದ ಹಳ್ಳಿ, ಕಲ್ಲಹಳ್ಳಿ, ಎಂ ಹುಣಸೇಕೆರೆ, ಕೋಪ್ಪಲು ಗ್ರಾಮಗಳು ಸೇರ್ಪಡೆಗೊಳ್ಳುತ್ತವೆ. ಇಷ್ಟು ಗ್ರಾಮಗಳಿದ್ದರೂ ನೆಪಮಾತ್ರಕ್ಕೆ ಉಪ ಆರೋಗ್ಯಕೇಂದ್ರವಿದ್ದು ಇಲ್ಲಿನ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ನೀಡುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಅನೇಕ ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಗ್ರಾಮಸ್ಥರ ಅಳಲು
ಹೆಬ್ಬಾಳು ಗ್ರಾಮದ ಸುತ್ತಮುತ್ತಲ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಿರು ಬೇಸಿಗೆ ಕಾಲದಲ್ಲಿ ಬತ್ತಿದ ಕೆರೆ ಹಾಗೂ ಹೊಂಡದ ತಳದ ನೀರನ್ನೇ ಜನರು ಕುಡಿಯಬೇಕಾಗಿದೆ. ಅಲ್ಲದೇ, ಬೇಸಿಗೆಯಲ್ಲಿ ಹೆಚ್ಚಾಗಿ ಸಾಂಕ್ರಾಮಿಕ ರೋಗ- ರುಜಿನಗಳು ಹರಡುತ್ತವೆ. ಈ ಸಂದರ್ಭ ಆರೋಗ್ಯದಲ್ಲಿ ಏರುಪೇರು ಆದಾಗ 8 ಕಿ. ಮೀ ದೂರದಲ್ಲಿರುವ ಬೇಲೂರು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಹೆಬ್ಬಾಳುವಿನಲ್ಲೇ ಆರೋಗ್ಯ ಕೇಂದ್ರವಿದ್ದರೆ ರೋಗಿಗಳು ಬವಣೆ ಪಡುವುದು ತಪ್ಪುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಅಲ್ಲಿದೆ... ಇಲ್ಲೇಕಿಲ್ಲ?
ಜಿಲ್ಲೆಯಲ್ಲಿ ರಾಜಕೀಯ ಪ್ರಬಾವ ಇರುವ ಗ್ರಾಮದಲ್ಲಿ ಕೇವಲ 3 ಸಾವಿರ ಜನಸಂಖ್ಯೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೊಡಲಾಗಿದೆ. ಆದರೆ ಹೆಬ್ಬಾಳು ಗ್ರಾಮದಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದರೂ ಆರೋಗ್ಯ ಕೇಂದ್ರ ಸ್ಥಾಪಿಸಲು ಮೀನಮೇಷ ಎಣಿಸುತ್ತಿದ್ದಾರೆ.
ಪದಾಧಿಕಾರಿಗಳ ಒತ್ತಾಯ
ರಾತ್ರಿ ವೇಳೆ ಮಹಿಳೆಯರಿಗೆ, ವೃದ್ಧರಿಗೆ ಆರೋಗ್ಯ ಕೈ ಕೊಟ್ಟರೆ ಅಥವಾ ಹೆರಿಗೆ ನೋವು ಜಾಸ್ತಿಯಾದರೆ, ಆಸ್ಪತ್ರೆಗೆ ಕರೆದುಕೊಂಡ ಹೋಗಲು ವಾಹನದ ಸೌಲಭ್ಯ ಇರುವದಿಲ್ಲ, ಉಳ್ಳವರು ಖಾಸಗಿ ವಾಹನದಲ್ಲಿ ನಗರ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ಕಡುಬಡವರು ವಾಹನವಿಲ್ಲದೆ ಪರದಾಡುತ್ತಾರೆ. ಈ ಕಾರಣದಿಂದ ಸಣ್ಣ- ಪುಟ್ಟ ಕಾಯಿಲೆಗಳಿಗೆ ಅನುಕೂಲವಾಗುವಂತೆ ಹೆಬ್ಬಾಳು ಗ್ರಾಮಕ್ಕೆ ಆರೋಗ್ಯ ಕೇಂದ್ರ ನೀಡಬೇಕು ಎಂದು ಹಲವು ಮಹಿಳಾ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ತಾಲೂಕಿನ ಕೆಸಗೋಡು ಎಂ.ಎನ್. ಕೊಪ್ಪಲು, ಚಟಚಟಿಹಳ್ಳಿ, ಹಗರೆ, ನಾಗೇನಹಳ್ಳಿ, ಗೆಂಡೇಹಳ್ಳಿ, ಬಿಕ್ಕೋಡು, ಹಳೇಬೀಡು ಹಾಗೂ ಅರೇಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ, ಹೆಚ್ಚಿನ ಜನಸಂಖ್ಯೆ ಹೊಂದಿರುವ ಹೆಬ್ಬಾಳು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ನೀಡಬೇಕು. ಹೆಬ್ಬಾಳು ಸೇರಿದಂತೆ ಸುತ್ತಮುತ್ತ ಹಲವಾರು ಗ್ರಾಮಗಳಿದ್ದು ಆರೋಗ್ಯ ಉಪ ಕೇಂದ್ರದ ಬದಲು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಲ್ಪಿಸಲಿ ಎಂಬುದು ಗ್ರಾಮಸ್ಥರು ಬೇಡಿಕೆಯಾಗಿದೆ. ಈ ಬಗ್ಗೆ ಈ ಭಾಗದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರು ಮತ್ತು ಶಾಸಕರು ಗಮನ ಹರಿಸಿ ಗ್ರಾಮಕ್ಕೆ ಸೌಲಭ್ಯ ನೀಡುವಲ್ಲಿ ಮುಂದಾಗಬೇಕಿದೆ.