ಆಲೂರಿಗೆ ತಂಪೆರದ ಸೋನೆ ಮಳೆ
ಆಲೂರು: ವಾಯುಬಾರ ಕುಸಿತದಿಂದಾಗಿ ಬೆಳಗ್ಗೆ 10ರಿಂದ ಪ್ರಾರಂಭವಾದ ಸೋನೆ ಮಳೆಗೆ ಆಲೂರು ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿತು. ಬುಧವಾರದವರೆಗೂ 30ರಿಂದ 35 ಡಿಗ್ರಿ ತಾಪಮಾನ ಇದ್ದ ತಾಲೂಕನ್ನು ಗುರುವಾರ ಬಂದ ಮಳೆ ಏಕಾಏಕಿ ತಂಪಾಗಿಸಿತು.
ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ: ವಾತಾವರಣಕ್ಕೆ ಪಟ್ಟಣದಲ್ಲಿ ಜನರ ಓಡಾಟವೇ ಕಾಣದಾಗಿತ್ತು. ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದರೂ ಸಹ ವಿದ್ಯಾರ್ಥಿಗಳು ಕಂಪ್ಯೂಟರ್ ಪಾರ್ಲರ್‌ಗಳಿಗೆ ಭೇಟಿ ನೀಡದ ಕಾರಣ ಅಂಗಡಿಯವರು ವಿದ್ಯಾರ್ಥಿಗಳಿಗಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು.
ಗುಂಡು, ತುಂಡಿಗೆ ಡಿಮ್ಯಾಂಡ್: ಆಲೂರಿನಲ್ಲಿ ಚಳಿಯ ವಾತಾವರಣದಿಂದಾಗಿ ಮದ್ಯ ಮಾರಾಟ ಭರ್ಜರಿಯಾಗಿ ನಡೆದರೆ ಮಾಂಸದಂಗಡಿಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ತೊಂದರೆ: ಪಟ್ಟಣದ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದಾಗಿ ರಸ್ತೆ ತುಂಬೆಲ್ಲ ಗುಂಡಿಗಳಿಗೆ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಆ ವೇಳೆಯಲ್ಲಿ ಪಾದಚಾರಿಗಳಿಗೆ ಕೆಸರೆರಚಿ ತೊಂದರೆ ಉಂಟಾಯಿತು.
ಪಟ್ಟಣ ಪಂಚಾಯ್ತಿವತಿಯಿಂದ ನಡೆಯುತ್ತಿರುವ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗೆ ತೊಂದರೆ ಉಂಟಾಗಿದೆ. ಈ ಮಳೆಯಿಂದಾಗಿ ರೈತರ ಮೊಗದಲ್ಲಿ ಹರ್ಷ ವ್ಯಕ್ತವಾಗಿದ್ದು, ಶುಂಠಿ ಹಾಗೂ ಕಾಫಿ ಬೆಳೆಗಾರರಿಗೆ ಅನುಕೂಲವಾಗಿದ್ದು, ಈಗ ಭೂಮಿಯನ್ನು ಉಳುಮೆ ಮಾಡುವವರು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಂಡಿದ್ದಾರೆ.
ವಿದ್ಯುತ್ ಕಣ್ಣಾಮುಚ್ಚಾಲೆ: ಕಳೆದ ಹಲವಾರು ದಿನಗಳಿಂದ ಸತತವಾಗಿ ಬಿಸಿಲಿನಿಂದ ಕಾದ ವಿದ್ಯುತ್ ಕಂಬಗಳು ಪಿನ್ ಇನ್ಸುಲೇಟರ್‌ಗಳು ಏಕಾಏಕಿ ಮಳೆಯಿಂದಾಗಿ ತಂಪಾದ ಪರಿಣಾಮ ಅವುಗಳಲ್ಲಿ ರಂದ್ರಗಳು ಉಂಟಾದ ಪರಿಣಾಮ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು.