ಕಸಾಪ ಸಂಸ್ಥಾಪನಾ ದಿನಾಚರಣೆ ಇಂದು
ಹೊಳೆನರಸೀಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಪಟ್ಟಣದ ನ್ಯಾಯಾಲಯ ರಸ್ತೆಯಲ್ಲಿನ ಉರ್ದು ಶಾಲೆಯಲ್ಲಿ ಏರ್ಪಡಿಸಲಾಗಿದ್ದು, ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ಧನ್ ನೆರವೇರಿಸುವರು. ಕನ್ನಡ ಸಾಹಿತ್ಯಪರಿಷತ್ತು ನಡೆದು ಬಂದದಾರಿ ಈ ವಿಷಯವಾಗಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎನ್. ರಾಮಸ್ವಾಮಿ ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮ್‌ದೇವ್ ಹೇಳಿಕೆಗೆ ಖಂಡನೆ
ಹೊಳೆನರಸೀಪುರ: ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮದೇವ್ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಟಿ. ಲಕ್ಷ್ಮಣ್ ಖಂಡಿಸಿದ್ದಾರೆ.
ಈ ಕುರಿತಂತೆ ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ದಲಿತರ ಸಮಸ್ಯೆಗಳನ್ನು ಹತ್ತಿರದಿಂದ ಅರಿಯಲು ರಾಹುಲ್ ಗಾಂಧಿ ಕೈಗೊಂಡಿರುವ ನಿಲುವನ್ನು ಇಡೀ ದಲಿತ ಸಮುದಾಯ ಹೆಮ್ಮೆಯಿಂದ ಸ್ವಾಗತಿಸುತ್ತದೆ. ಅವರು ಕೈಗೊಂಡಿರುವ ನಿಲುವು ಪ್ರಶಂಸನೀಯ. ಆದರೆ, ರಾಮ್‌ದೇವ್ ಅವರು, ದಲಿತರ ಮನೆಗಳಿಗೆ ರಾಹುಲ್ ಗಾಂಧಿ ಹನಿಮೂನ್ ಮಾಡಲು ಬರುತ್ತಾರೆಂದು ಹೇಳಿರುವುದು ದಲಿತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು. ಇದೇ ವೇಳೆ, ರಾಮ್‌ದೇವ್
ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವ ಕೆಲ ಬಿಜೆಪಿ ನಾಯಕರುಗಳ ನಿಲುವಿಗೆ ಲಕ್ಷ್ಮಣ್ ಖಂಡನೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಕುಟುಂಬ ದೇಶದ ಜನತೆಯ ಸೇವೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಕುಟುಂಬ. ಅದರಲ್ಲಿ ದೇಶದ ಸಮಸ್ತ ನಾಗರೀಕರ ಹಿತ ಬಯಸುವತ್ತ, ಅದರಲ್ಲಿಯೂ ವಿಶೇಷವಾಗಿ ದಲಿತರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಮುಂದಾಗಿರುವ ರಾಹುಲ್ ಗಾಂಧಿಯವರ ನಿಲುವನ್ನು ಟೀಕಿಸಿರುವ ಬಾಬಾ ರಾಮದೇವ್ ಅವರಂಥ ಕೋಮುವಾದಿಗಳನ್ನು ಸರ್ಕಾರ ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್.ಟಿ. ಲಕ್ಷ್ಮಣ್ ಆಗ್ರಹಿಸಿದರು.