ಪಿಯುಸಿ ಫೇಲಾಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಚನ್ನರಾಯಪಟ್ಟಣ: ದ್ವಿತೀಯ ಪಿಯುಸಿ ಅನುತ್ತೀರ್ಣನಾದ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಹೌಸಿಂಗ್ಬೋರ್ಡ್ ಬಡಾವಣೆಯ ವಾಸಿ ಚಂದ್ರಶೇಖರ್ ಅವರ ಪುತ್ರ ಕುಮಾರ್(18) ನೇಣಿಗೆ ಶರಣಾದ ಯುವಕನಾಗಿದ್ದು, ಈತ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಮಾರ್ಚ್‌ನಲ್ಲಿ ನಡೆದ ಪರಿಕ್ಷೆಯ ಫಲಿತಾಂಶವನ್ನು ಗುರುವಾರ ಇಂಟರ್‌ನೆಟ್‌ನಲ್ಲಿ ನೋಡಿ ಅನುತ್ತೀರ್ಣನಾದ ಕಾರಣವನ್ನು ಮುಂದಿಟ್ಟುಕೊಂಡು ನೇಣಿಗೆ ಶರಣಾಗಿದ್ದಾನೆ.
ಗುರುವಾರ ಬೆಳಗ್ಗೆ ಕುಮಾರ್ ತಂದೆ ಚಂದ್ರಶೇಖರ್ ಇಂಟರ್‌ರ್ನೆಟ್ ಪಾರ್ಲರ್‌ನಲ್ಲಿ ಮಗ ಅನುತ್ತೀರ್ಣನಾಗಿರುವ ಬಗ್ಗೆ ಮನೆಗೆ ವಿಷಯ ತಿಳಿಸಿದ್ದಾರೆ. ಅದನ್ನು ನಂಬದೇ ಆತ ಮತ್ತೆ ಇಂಟರ್‌ನೆಟ್ ಸೆಂಟರ್‌ಗೆ ಬಂದು ಫಲಿತಾಂಶ ನೋಡಿದ್ದಾನೆ. ಆಗ, ತಾನು ಅನುತ್ತೀರ್ಣರಾಗಿರುವುದು ಖಾತರಿಯಾಗಿದೆ. ಮನೆಯಲ್ಲಿ ಬೇಸರದಿಂದ ಕುಳಿತಿದ್ದ ಕುಮಾರ್‌ನನ್ನು ಆತನ ಸ್ನೇಹಿತರು ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ಕ್ರಿಕೆಟ್ ಆಟವಾಡಲು ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ನೀರು ಕುಡಿಯುವ ನೆಪದಲ್ಲಿ ಪುನಃ ಮನೆಗೆ ಬಂದ ಆತ, ಮನೆಯಲ್ಲಿನ ಸ್ನಾನದ ಮನೆಯಲ್ಲಿ ಹಗ್ಗದಿಂದ ಕುತ್ತಿಗೆಗೆ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾನೆ.