ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ
ಅರಸೀಕೆರೆ: ಪಟ್ಟಣದ ಹಾಸನ ರಸ್ತೆ ಬಲಭಾಗದ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ಮುತ್ತು ಮಾರಿಯಮ್ಮ ದೇವಿಯ 64ನೇ ವರ್ಷದ ಕರಗ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಜರುಗಿತು.
ಕರಗ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವಿಶೇಷ ಪೂಜೆ ಆರಂಭಗೊಂಡವು. ಅಭಿಷೇಕ ಪ್ರಿಯೆಯಾದ ಶ್ರೀ ಮುತ್ತು ಮಾರಿಯಮ್ಮ ದೇವಿಗೆ ಮುಂಜಾನೆ ಮುತ್ತೈದೆಯರಿಂದ ಕ್ಷೀರಾಭಿಷೇಕ ಹಾಗೂ ಪಂಚಾಮೃತಾಭಿಷೇಕ ನಡೆದ ನಂತರ ಮಹಾ ಮಂಗಳಾರತಿ ನಡೆಯಿತು. ಮದ್ಯಾಹ್ನ ಪಟ್ಟಣದ ಹೊರವಲಯದಲ್ಲಿರುವ ಕಂತೇನಹಳ್ಳಿ ಕೆರೆ ಅಂಗಳದಲ್ಲಿ ನೆಲೆಸಿರುವ ಶನೇಶ್ವರ ದೇವಾಲಯದಿಂದ ಶೃಂಗರಿಸಿದ ಟ್ರ್ಯಾಕ್ಟರ್ ಮೇಲೆ ಅರಸೀಕೆರೆ ಗ್ರಾಮದೇವತೆಗಳಾದ ಶ್ರೀ ಕರಿಯಮ್ಮದೇವಿ, ಕೆಂಚರಾಯಸ್ವಾಮಿ, ದೂತರಾಯ ಸ್ವಾಮಿ ಹಾಗೂ ಮುತ್ತು ಮಾರಿಯಮ್ಮ ದೇವಿಯನ್ನ ಪ್ರತಿಷ್ಠಾಪಿಸಿ ಮಂಗಳಾರತಿ ಬೆಳಗುತ್ತಿದ್ದಂತೆ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಿತು.
ಹರಕೆ ಹೊತ್ತಿದ್ದ ಹತ್ತಾರು ಯುವಕರು ಕಬ್ಬಿಣದ ಸಲಾಕೆಗಳನ್ನ ತಮ್ಮ ಎರಡೂ ಕೆನ್ನೆಗಳಿಗೂ ಚುಚ್ಚಿಕೊಂಡಿದ್ದರೆ ಮತ್ತೆ ಕೆಲವರು ಕಬ್ಬಿಣದ ಸಲಾಖೆಯಿಂದ ಮಾಡಲಾದ ಕೊಕ್ಕೆಗಳನ್ನ ತಮ್ಮ ಮೈಗೆ ಸಿಕ್ಕಿಸಿಕೊಂಡು ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದ ಟ್ರ್ಯಾಕ್ಟರನ್ನು ಎಳೆದರೆ ಮತ್ತೆ ಕೆಲವರು ರಾಟೆಯಲ್ಲಿ ಸುತ್ತುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿ ನೋಡುಗರ ಮೈನವಿರೇಳಿಸುವಂತೆ ಮಾಡಿತು.
ಕರಗ ಮಹೋತ್ಸವದ ಅಂಗವಾಗಿ ಬೆಂಗಳೂರು ಮೈಸೂರಿನಿಂದಲ್ಲದೇ ನೆರೆ ರಾಜ್ಯ ತಮಿಳುನಾಡಿನಿಂದಲೂ ಆಗಮಿಸಿದ್ದ ಭಕ್ತರು ಮುತ್ತು ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದರ್ಶನ ಭಾಗ್ಯ ಪಡೆದು ಪುನೀತರಾದರು.
ಉತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಲಿಯ ಸದಸ್ಯರಾದ ವೇಲರಾಜು, ಎಟಿ ಮಂಜುನಾಥ್, ಹರೀಶ್, ಪುರಸಭೆ ಸದಸ್ಯರಾದ ಸುರೇಶ್,ಬಾಲಮುರುಘನ್, ಅಣ್ಣಾದೊರೈ, ಶಿವನ್ ರಾಜ್, ಮಣಿಕಂಠ ಮತ್ತಿತರರು ಇದ್ದರು.