'ರಾಷ್ಟ್ರ ಪ್ರೇಮ ಶಿಕ್ಷಣ ಅಗತ್ಯ'
ಹಾಸನ: ಯುವಕರಿಗೆ ರಾಷ್ಟ್ರ ಪ್ರೇಮದ ಶಿಕ್ಷಣ ಅಗತ್ಯವಿದೆ ಎಂದು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯರು ಎಂ.ಕೆ. ಕಮಲ್ ಕುಮಾರ್ ತಿಳಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್ 125ನೇ ಜಯಂತಿ ಅಂಗವಾಗಿ ಭಾರತ ಸೇವಾದಳ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್‌ಗಳಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಭಾರತ ಸೇವಾದಳ ಬಗ್ಗೆ ಮಾಹಿತಿ ನೀಡಿ, ಶಿಬಿರ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿ ಎಲ್ಲೇ ಜನಿಸಿರಲಿ ಆ ನಾಡಿನ ನೆಲದ ಬಗ್ಗೆ ಗೌರವ ಹೊಂದಿದ್ದರೆ ಆತನಿಂದ ಆ ದೇಶಕ್ಕೆ ಯಾವ ರೀತಿಯಲ್ಲೂ ಧಕ್ಕೆ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು. ಅಲ್ಲದೇ, ರಾಷ್ಟ್ರಕ್ಕೆ ಮಾರಕವಾಗಿರುವ ವ್ಯಕ್ತಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಹೋರಾಟ ನಡೆಸಿದೆ: 1928ರಿಂದ ಸೇವಾದಳ ತನ್ನ ಕಾರ್ಯಚಟುವಟಿಕೆ ಮಾಡುತ್ತ ಬಂದಿದೆ. ಸೇವಾದಳ ನಿರಂತರವಾಗಿ ರಾಷ್ಟ್ರದ ಯುವಕರಿಗೆ ಸ್ವಯಂ ಸೇವಕರಾಗಿ ಕೆಲಸ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಸ್ಥಾನ ಸೇವಾದಳವಾಗಿ ಹೋರಾಟ ನಡೆಸಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೊದಲು ಧ್ವಜಾವಂದನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ವೇಳೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಲೋಕೇಶ್ ಮೂರ್ತಿ, ಪುಟ್ಟಯ್ಯ, ನಾಗರಾಜ್, ವಿಷ್ಣುವರ್ಧನ್ ಹಾಗೂ ಇತರರು ಪಾಲ್ಗೊಂಡಿದ್ದರು. ಭಾರತ ಸೇವಾದಳ ಜಿಲ್ಲಾ ಸಂಘಟಕರು ವಿ.ಎಸ್. ರಾಣಿ ಸ್ವಾಗತಿಸಿದರು.