ರೈತರ ಪ್ರತಿಭಟನೆ ಇಂದು
ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ದರ ಏರಿಕೆಯ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ಮೇ 9ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ರೈತರ ಜೀವನಾಡಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಾದ ಬಿತ್ತನೆ ಬೀಜದ ದರ ಏರಿಕೆ, ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕಾಡು ಪ್ರಾಣಿಗಳ ಹಾವಳಿ, ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಡಿಮೆ ದರದಲ್ಲಿ ಮಾರಾಟ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲೆಯ ರೈತರ ಈ ಸಮಸ್ಯಗಳ ಬಗ್ಗೆ ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಇದುವರೆಗು ಗಂಭೀರ ಪ್ರಯತ್ನ ನಡೆಸಿಲ್ಲ. ಆಲೂಗಡ್ಡೆ ಬೀಜ ಮತ್ತು ಬೆಳೆಯ ಖಾಸಗೀ ದಾಸ್ತಾನು ಮತ್ತು ವ್ಯಾಪಾರಿಗಳ ಲಾಬಿ ಹೆಚ್ಚಾಗಿದ್ದು ಇದರಿಂದ ರೈತರು ಆಲೂಗಡ್ಡೆ ಬೆಳೆಯನ್ನು ಕೈಬಿಟ್ಟು ಅನಿವಾರ್ಯವಾಗಿ ಶುಂಠಿ ಹಾಗೂ ಮತ್ತಿತರ ವಾಣಿಜ್ಯ ಬೆಳೆಗಳ ಕಡೆ ಗಮನಹರಿಸುತ್ತಿದ್ದಾರೆ, ಇನ್ನೊಂದೆಡೆ ಕೃಷಿಯನ್ನೇ ಬಿಡುವಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಆಲೂಗಡ್ಡೆ ಬೆಳೆಯುತ್ತಿರುವ ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಆಗ್ರಹಿಸಿ ಮೇ 9ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದ್ದಾರೆ.