ವಾಣಿಜ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ
ಹೊಳೆನರಸೀಪುರ: ವಾಣಿಜ್ಯ ಶಾಸ್ತ್ರದ ಅಧ್ಯಯನದಿಂದ ಆರ್ಥಿಕತೆ, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಬಹುದಾಗಿದೆ ಎಂದು ಇಲ್ಲಿನ ಹಿರಿಯ ವಕೀಲ ಎ. ತಾಂಡವೇಶ್ವರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ಸ್ನಾತಕೋತ್ತರ ವಿಭಾಗದ ಅಂತಿಮ ಎಂ.ಕಾಂ ವಿದ್ಯಾರ್ಥಿಗಳಿಗಾಗಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ವಿಜ್ಞಾನ, ಕಂಪ್ಯೂಟರ್ ಶಿಕ್ಷಣಕ್ಕಷ್ಟೇ ಹೆಚ್ಚಿನ ಪ್ರಾಶಸ್ತ್ಯ, ಇನ್ನುಳಿದಂತೆ ವಾಣಿಜ್ಯ ವಿಭಾಗದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಸಹಜವಾಗಿ ಇತ್ತು. ಆದರೆ, ಇಂದು ವಾಣಿಜ್ಯ ಶಾಸ್ತ್ರಕ್ಕೆ ವಿಫುಲವಾದ ಅವಕಾಶಗಳು ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು.
ವಿನೀತ ಭಾವ ಬೇಕು: ಯಾವುದೇ ವಿಷಯವಾದರೂ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಕಲಿಕೆ ನಿರಂತರವಾಗಿದ್ದಾಗ ಯಶಸ್ಸು ಹಾಗೂ ಅವಕಾಶಗಳು ತಾನಾಗಿಯೇ ಲಭ್ಯವಾಗುತ್ತವೆ ಎಂದು ಹೇಳಿದರು.
ಎಷ್ಟೇ ಬೆಳೆದರೂ ವಿದ್ಯಾರ್ಥಿಯು ತಾನಿನ್ನೂ ವಿದ್ಯಾರ್ಥಿಯೇ ಎಂಬ ವಿನೀತ ಭಾವವನ್ನು ಮೈಗೂಡಿಸಿಕೊಂಡಾಗ ಆತನ ಭವಿಷ್ಯದ ಜೀವನ ಉತ್ತಮ ಹಂತಕ್ಕೆ ತಲುಪಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಕಿವಿಮಾತು: ಕೇವಲ ಅಂಕಗಳು ಮಾತ್ರವೇ ವಿದ್ಯಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ. ಬದಲಿಗೆ ವಿಷಯದೆಡೆಗಿನ ನಿಜವಾದ ಗ್ರಹಿಕೆ, ಸಲಹೆ ಮತ್ತು ತಾಳ್ಮೆಯ ಮನೋಧೋರಣೆಯನ್ನು ವಿದ್ಯಾರ್ಥಿಯು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ತಮ್ಮ ಜೀವನದ ಅಲ್ಪ ಭಾಗವನ್ನು ಸಮಾಜ ಸೇವೆಗೂ ಮುಡಿಪಾಗಿರಿಸುವಂತೆ ಎ. ತಾಂಡವೇಶ್ವರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಹಕಾರಿ: ಎಂ.ಕಾಂ. ಸ್ನಾತಕೋತ್ತರ ವಿಭಾಗದ ಸಂಯೋಜಕ ವಿಜಯಕುಮಾರ್ ಮಾತನಾಡಿ, ಮೌಲ್ಯಗಳ ಜೊತೆಗೆ ಜ್ಞಾನವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ಜೊತೆಗೆ, ವಾಣಿಜ್ಯ ಶಾಸ್ತ್ರದ ಅಧ್ಯಯನದಿಂದ ವಿದ್ಯಾರ್ಥಿಗಳು ವರ್ತಮಾನದ ತಮ್ಮ ಜೀವನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದರು.
ತಮ್ಮ ಜೀವನದ ಗುರಿಯ ಕುರಿತಂತೆ ಗುಣಮಟ್ಟವುಳ್ಳ ಹಾಗೂ ಖಚಿತ ನಿರ್ಧಾರಗಳನ್ನು ಕೈಗೊಳ್ಳುವ ಗಟ್ಟಿತನವನ್ನು ಮೈಗೂಡಿಸಿಕೊಳ್ಳುವಂತೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ. ಇರ್ಷಾದ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಮಲ್ಲೇಶ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಅರುಣೇಶ್, ಅಧ್ಯಾಪಕ ಭುವನೇಂದ್ರ ಇದ್ದರು.
ಸತೀಶ್ ಪ್ರಾರ್ಥಿಸಿ, ಗ್ರಂಥಾಲಯಾಧಿಕಾರಿ ಎಂ.ಸಿ. ಕುಮಾರಸ್ವಾಮಿ ಸ್ವಾಗತಿಸಿದರು.