ಶಿಥಿಲಾವಸ್ಥೆಯಲ್ಲಿ ಸಾರ್ವಜನಿಕ ಗ್ರಂಥಾಲಯದ ಚಾವಣಿ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿನ ಸಾರ್ವಜನಿಕರ ಗ್ರಂಥಾಲಯದ ಚಾವಣಿ ಹಂತಹಂತವಾಗಿ ಕುಸಿಯುತ್ತಿರುವ ಕಾರಣ ಗ್ರಂಥಾಲಯದ ಒಳಗೆ ಓದುಗರು ಹೋಗಲು ಜೀವ ಭಯ ಕಾಡುವಂತಾಗಿದೆ. ಈ ಸಂಬಂಧ ಇಲಾಖೆಗೆ ಸಾರ್ವಜನಿಕರು ಮಾಡಿದ ಮನವಿಗೆ ಮೇಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶಿಥಿಲಾವಸ್ಥೆಗೆ ತಲುಪಿದ ಚಾವಣಿಯ ಆರ್ಸಿಸಿಗೆ ಬಳಸಿದ್ದ ಕಬ್ಬಿಣದ ಸರಳುಗಳು ಕಾಣುತ್ತಿವೆ. ಇದರ ಪರಿಣಾಮ ಗ್ರಾಮಸ್ಥರು ಈ ಗ್ರಂಥಾಲಯದ ಒಳಗೆ ಹೋಗುವುದಕ್ಕೆ ಹೆದರುತ್ತಿದ್ದು, ಯಾವ ಕ್ಷಣದಲ್ಲಿಯಾದರೂ ಅವಶೇಷಗಳು ಕುಸಿದು ತಲೆಯ ಮೇಲೆ ಬೀಳುತ್ತವೆ ಎಂಬ ಪ್ರಾಣ ಭಯದ ಅತಂಕ ಇಲ್ಲಿನ ಓದುಗರನ್ನು ಕಾಡುತ್ತಿದೆ. ಈ ಚಾವಣಿ ರಿಪೇರಿ ಕಾರ್ಯವನ್ನು ಕೈಗೊಳ್ಳುವ ಮೂಲಕ ಸಮಸ್ಯೆ ತ್ವರಿತವಾಗಿ ಪರಿಹಾರ ಮಾಡಿ ಎಂದು ಇಲ್ಲಿನ ಜನಪತ್ರಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದರೂ, ಈವರೆಗೆ ಯಾರೂ ಇದರ ಕಡೆಗೆ ಗಮನ ಕೊಟ್ಟಿಲ್ಲ.
ಇಲ್ಲಿನ ಗ್ರಂಥಾಲಯದ ಸಿಬ್ಬಂದಿ ಚಿಕ್ಕಮ್ಮ ಪ್ರತಿನಿತ್ಯ ಜೀವ ಭಯದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಉಂಟಾಗಿದೆ.
ಅಲ್ಲದೇ ಲಕ್ಷಾಂತರ ರು. ಮೌಲ್ಯದ ಪುಸ್ತಕಗಳೂ ಧೂಳು ಹಿಡಿದು ಹಾಳುಗುವುದನ್ನು ತಪ್ಪಿಸಲು ದೂಳು ಹಿಡಿದ ಹಾಳಾಗುತ್ತಿರುವುದನ್ನು ತಪ್ಪಿಸಲು ಇಲಾಖೆ ಅಧಿಕಾರಿಗಳು ಗ್ರಂಥಾಲಯವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡಬೇಕಿದೆ.