ಅಧಿಕಾರಿಗಳಿಂದ ರು.500 ಕೋಟಿ ಲೂಟಿ
ಕನ್ನಡಪ್ರಭ ವಾರ್ತೆ ಹಾಸನ ಮೇ 9
ಸಕಲೇಶಪುರ- ಆಲೂರಿನಲ್ಲಿ ಡಿವೈಎಸ್ಪಿ ಕುಮಾರಸ್ವಾಮಿ ಮತ್ತು ಕಾನ್ಸ್ಟೇಬಲ್ಗಳ ನೇತೃತ್ವದಲ್ಲೇ ಕಳೆದ ಆರು ತಿಂಗಳಿಂದ ಮರಳು ಮತ್ತು ಮರ ಲೂಟಿಯಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಒಳಗೊಂಡಂತೆ ಲೂಟಿಕೋರರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ನದಿ ಮತ್ತು ಉಪ ನದಿಗಳಲ್ಲಿ ಸುಮಾರು 500 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಮರಳು ಮತ್ತು ಮರ ಲೂಟಿಯಾಗಿದೆ. ಬಳ್ಳಾರಿಯ ಜನಾರ್ದನ ರೆಡ್ಡಿ ಹಾಗೂ ಅವರ ತಂಡ ಗಣಿ ಲೂಟಿ ಮಾಡಿದಂತೆ ಅತಿ ಹೆಚ್ಚು ಮರಳು ಲೂಟಿ ಮಲೆನಾಡು ಭಾಗದಲ್ಲಿ ನಡೆಯುತ್ತಿದೆ. ಇದಕ್ಕೆ ಡಿವೈಎಸ್ಪಿ ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ಅಧಿಕಾರಿಗಳು ಷಾಮೀಲು: ಸಕಲೇಶಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆಲೂರು ತಾಲೂಕಿನ ತಹಸೀಲ್ದಾರ್, ಪಿಡಬ್ಲ್ಯುಡಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಾಯಕತ್ವದಲ್ಲಿ ಮರಳು ಲೂಟಿಯಾಗುತ್ತಿದೆ. ಕೆಲ ಜನರಿಗೆ ಮರಳು ಗುತ್ತಿಗೆ ನೀಡಲು ಗುರುತು ಮಾಡಲಾಗಿರುವ ಪ್ರದೇಶವನ್ನು ಈಗಾಗಲೇ ಲೂಟಿ ಕೋರರ ಮೂಲಕ ಸಾಗಣಿಕೆ ಕಾರ್ಯ ನಡೆದಿದೆ. ರೆವಿನ್ಯೂ ಇಲಾಖೆ ಹಾಗೂ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಕೇರಳ ಮತ್ತು ಬೆಂಗಳೂರು ಮಾರ್ಗದ ಲಾರಿಗಳಿಗೆ ನೇರವಾಗಿ ಮರಳು ಸಾಗಣಿಕೆ ಮಾಡಿದ್ದಾರೆ ಎಂದು ದೂರಿದರು.
ಕಳ್ಳರಿಗೆ ಸಿಸಿ ಕ್ಯಾಮೆರಾ?: ಇತ್ತೀಚೆಗೆ ವಿರೋಧ ಪಕ್ಷದವರಿಗೆ ತಿಳಿಸದೆ ಕ್ಷೇತ್ರದ ಶಾಸಕರು ಹಾಗೂ ಅವರ ಹಿಂಬಾಲಕರ ತಂಡ ಹಾಗೂ ಅಧಿಕಾರಿ ವರ್ಗ ಸಭೆ ನಡೆಸಿದ್ದಾರೆ. ಮರಳು ತೆಗೆಯುವ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇವೆಲ್ಲಾ ಮರಳು ದಂಧೆ ಕೊನೆಯ ಸಮಯದಲ್ಲಿ ನಡೆಸಿದ್ದಾರೆ. ಮರಳು ಸಾಗಣಿಕೆ ಮಾಡುವ ದಂಧೆಕೋರ ಆನೆಮಾಲ್ ಅಸೆನಾರ್ ಇವರಿಗೆ ಸಿಸಿ ಕ್ಯಾಮೆರಾದ ಜವಾಬ್ದಾರಿ ನೀಡಲಾಯಿತು ಎಂದು ಕಿಡಿಕಾರಿದರು.
ವನ್ಯಮೃಗಗಳ ಬೇಟೆ: ಸಕಲೇಶಪುರ ಭಾಗದ ಡಿವೈಎಸ್ಪಿ ಕುಮಾರಸ್ವಾಮಿ ಮತ್ತು ಕಾನ್ಸ್ಟೇಬಲ್ ಪುಟ್ಟಸ್ವಾಮಿ ಮತ್ತು ಧರ್ಮ ಪೊಲೀಸ್ ಬಟ್ಟೆ ಧರಿಸದೇ, ಪ್ರತಿನಿತ್ಯ ತಮ್ಮ ವಾಹನದ ಮೂಲಕ ದಂಧೆ ಹಣ ವಸೂಲಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಳ್ಳ ಸಾಗಣಿಕೆದಾರರ ಜೊತೆ ಸೇರಿ ಅಪರೂಪದ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಣಿಕೆ ಮಾಡುವುದಲ್ಲದೆ, ವನ್ಯ ಮೃಗಗಳನ್ನು ಬೇಟೆಯಾಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಯಸಳೂರು ವಲಯದ ಅರಣ್ಯಾಧಿಕಾರಿ ವಿನಯ್ ಚಂದ್ರ ಮತ್ತು ಇವರ ಸಿಬ್ಬಂದಿ ಮರಗಳ್ಳತನಕ್ಕೆ ನೇರ ಹೊಣೆಗಾರರು ಎಂದು ಆರೋಪಿಸಿದರು.
ಸಿಎಂ ಬಳಿ ನಿಯೋಗ: ಸಂವಿಧಾನಾತ್ಮಕ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಕಲೇಶಪುರ ತಾಲೂಕಿನಲ್ಲಿ ಕುಸಿದಿದೆ.
ಇಂತಹ ಲೂಟಿಯನ್ನು ತಡೆಯಲು ಸಾರ್ವಜನಿಕರು ಒಂದು ಕಡೆ ಎದುರುತ್ತಿದ್ದರೆ, ಮತ್ತೊಂದು ಕಡೆ ತಿಳಿದಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಸಕಲೇಶಪುರ- ಆಲೂರು ವಿಭಾಗದಲ್ಲಿ ನಡೆಯುತ್ತಿರುವ ಲೂಟಿ ತಡೆಯಲು ಮುಖ್ಯಮಂತ್ರಿ ಬಳಿ ನಿಯೋಗ ತೆರಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್, ಡಿ.ಸಿ. ಸಣ್ಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆಲೂರಿನ ಕಬ್ಬಿನಹಳ್ಳಿ ಜಗದೀಶ, ಜಾಕೀರ್ ಇದ್ದರು.
ಮಾರುತಿ ಝೆನ್ಗೆ ಅವಕಾಶವಿಲ್ಲ
ಪಶ್ಚಿಮಘಟ್ಟದಲ್ಲಿ ಮತ್ತೆ ಮಾರುತಿ ಝೆನ್ ತೆರೆಯಲು ಅವಕಾಶ ಬಿಡುವುದಿಲ್ಲ ಹಾಗೂ ಅಗ್ನಿ ಗುಡ್ಡದಲ್ಲಿ ವಿಂಡ್ಫ್ಯಾನ್ ಆಳವಡಿಸಲು ಬಿಡುವುದಿಲ್ಲ. ಈ ವಿರುದ್ಧ ಚಳವಳಿ ನಡೆಸಲು ಸಿದ್ದ. ಈ ಬಗ್ಗೆ ಸಿಎಂಗೆ ಮನದಟ್ಟು ಮಾಡಿಕೊಡುವುದಾಗಿ ವಿಶ್ವನಾಥ್ ಹೇಳಿದರು.