ಅನಧಿಕೃತ ರಸಗೊಬ್ಬರ ಮಾರುವವರ ವಿರುದ್ಧ ಕ್ರಮ
ಹೊಳೆನರಸೀಪುರ: ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಇಲ್ಲಿನ ತಹಸೀಲ್ದಾರ್ ಎಸ್. ರಾಘವೇಂದ್ರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹೊಳೆನರಸೀಪುರ ತಾಲೂಕು ರಸಗೊಬ್ಬರ ಮತ್ತು ಪರಿಕರ ಮಾರಾಟಗಾರರ ಹಾಗೂ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಅಧಿಕಾರಿಗಳೊಡನೆ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಈ ಸಭೆ ನಡೆದಿತ್ತು.
ಸಕಾಲದಲ್ಲಿ ಗೊಬ್ಬರ ವಿತರಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರರು, ತಾಲೂಕಿನಲ್ಲಿ ಉತ್ತಮ ಮುಂಗಾರು ಪ್ರಾರಂಭವಾಗಿದ್ದು, ಪೂರಕ ಕೃಷಿ ಚಟುವಟಿಕೆಗಳು ಸಕಾಲದಲ್ಲಿ ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರಸಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಸೂಕ್ತ ಸಮಯದಲ್ಲಿ ಹಾಗೂ ಸರಿಯಾದ ಬೆಲೆಯಲ್ಲಿ ರಸಗೊಬ್ಬರ ಮತ್ತು ಪರಿಕರಗಳನ್ನು ಮಾರಾಟ ಮಾಡಬೇಕು. ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸದೇ ಗುಣಮಟ್ಟದ ರಸಗೊಬ್ಬರಗಳನ್ನು ಸಕಾಲದಲ್ಲಿ ರೈತರಿಗೆ ವಿತರಿಸಬೇಕು ಎಂದು ಸೂಚಿಸಿದರು.
ಎಲ್ಲೆಡೆ ನಿಗಾ: ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನೊಳಗೊಂಡಂತೆ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಈ ತಂಡ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಎಂ.ಆರ್.ಪಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡದಿರುವ ಬಗ್ಗೆ ಹಾಗೂ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವವರ ಕುರಿತಂತೆ ನಿಗಾ ವಹಿಸಲಿದೆ ಎಂದು ತಿಳಿಸಿದರು.
ವಿವರ ಸಲ್ಲಿಸಿ: ಅದೇ ರೀತಿ ಪ್ರತಿವಾರ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳ ಮಾರಾಟದ ವಿವರಗಳನ್ನು ತಾಲುಕಿನ ಕೃಷಿ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ನೀಡಬೇಕೆಂದು ತಿಳಿಸಿದ ಅವರು, ಇದರಿಂದ ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಅನುಕೂಲವಾಗುವುದೆಂದು ವಿವರಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಎಚ್. ಭಾನುಪ್ರಕಾಶ್ ಮಾತನಾಡಿ, ರಸಗೊಬ್ಬರ ನಿಯಂತ್ರಣ ಆದೇಶ (1985)ರ ನಿಯಮಗಳನ್ನು ಎಲ್ಲಾ ಮಾರಾಟಗಾರರಿಗೆ, ಸಹಕಾರ ಸಂಘಗಳ ಅಧಿಕಾರಿಗಳಿಗೆ ಸವಿವರವಾಗಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ರೈತ ಗಣೇಶ್, ರಸಗೊಬ್ಬರಗಳನ್ನು ಎಂ.ಆರ್.ಪಿ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದೇ ರೈತರಿಗೆ ಸಹಕರಿಸಬೇಕೆಂದು ಕೋರಿದರು.
ಮಾರಾಟಗಾರರ ಭರವಸೆ: ರಸಗೊಬ್ಬರ ಮಾರಾಟಗಾರರಾದ ದೇವರಾಜು ಮತ್ತು ಮುಕುಂದೇಗೌಡ ಮಾತನಾಡಿ, ರಸಗೊಬ್ಬರ ವಹಿವಾಟಿನಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಿದರು. ಅಲ್ಲದೇ, ರೈತರಿಗೆ ಮತ್ತು ತಾಲೂಕು ಆಡಳಿತಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ಕೊಡುವುದಾಗಿ ತಿಳಿಸಿದರು. ಸಭೆಯಲ್ಲಿ ತಾಲ್ಲೂಕಿನ ಖಾಸಗಿ ರಸಗೊಬ್ಬರ ಮಾರಾಟಗಾರರು, ಸಹಕಾರ ಸಂಘಗಳ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.