ಕಳಪೆ ಕಾಮಗಾರಿಗೆ ಆಕ್ರೋಶ
ರಾಮನಾಥಪುರ: ಕೊಣನೂರಿನ ಸುವರ್ಣ ಗ್ರಾಮ ಕಾಮಗಾರಿ ತೀರಾ ಕಳಪೆಯಿಂದ ಕೂಡಿದ್ದರೂ ಸಹ ಸಂಬಂಧಪಟ್ಟ ಎಂಜಿನಿಯರ್ಗಳು ಮತ್ತು ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷಿಸುತ್ತಿರುವುದು ಸಂದೇಹಕ್ಕೆ ಎಡೆ ಮಾಡಿದೆ ಎಂದು ಆರೋಪಿಸಿರುವ ಸ್ಥಳೀಯ ಗ್ರಾಪಂ ಅಧ್ಯಕ್ಷ ಕೃಷ್ಣ, ಈ ಬಗ್ಗೆ ಶೀಘ್ರವೇ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜನಸಾಮಾನ್ಯರ ಹಿತದೃಷ್ಟಿಯಿಂದ ಸುವರ್ಣ ಗ್ರಾಮ ಯೋಜನೆ ಜಾರಿಗೆ ತಂದಿದೆ. ಆದರೆ ಗುತ್ತಿಗೆದಾರರ ದುರಾಸೆಯಿಂದಾಗಿ ಅದು ಕೈಗೆಟುಕದಂತಾಗಿದೆ. ಕಳೆದ 2010-12ನೇ ಸಾಲಿನಲ್ಲಿ ಕೊಣನೂರು ಗ್ರಾಮದ ಸುವರ್ಣ ಗ್ರಾಮ ಕಾಮಗಾರಿ ಸುಮಾರು ರು. 1 ಕೋಟಿ 43 ಲಕ್ಷದ್ದಾಗಿದ್ದು, ಈ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ರಂಗರಾಜ್ ಅಯ್ಯಂಗಾರ್ ಎಂಬುವರು ಸರಿಯಾಗಿ ಕಾಮಗಾರಿ ನಿರ್ವಹಿಸದೇ ಕಳಪೆ ಕಾಮಗಾರಿ ಮಾದಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದ ಸಿಮೆಂಟ್ ರಸ್ತೆ, ಒಳಚರಂಡಿಗಳು ತೀರಾ ಕಳಪೆಯಾಗಿದೆ ಎಂದು ದೂರಿದರು.
ಸಂಬಂಧಪಟ್ಟ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ಗೆ ಈ ವಿಚಾರವಾಗಿ ಸಾಕಷ್ಟು ದೂರು ನೀಡಲಾಗಿದೆ. ಆದರೆ, ದೂರನ್ನು ನಿರ್ಲಕ್ಷಿಸಲಾಗಿದೆ. ಇದು ಸಂದೇಹಕ್ಕೆಡೆ ಮಾಡಿಕೊಟ್ಟಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಕೃಷ್ಣ ಒತ್ತಾಯಿಸಿದರು.
ಲೋಕಾಯುಕ್ತಕ್ಕೆ ದೂರು: ಕಾಮಗಾರಿ ಇನ್ನೂ ರು. 10 ಲಕ್ಷದಷ್ಟು ಬಾಕಿ ಇದ್ದರೂ ಸಹ ಕಾಮಗಾರಿ ಪೂರೈಸದೆ ಸಂಪೂರ್ಣ ಬಿಲ್ ಪಡೆಯಲು ಹವಣಿಸುತ್ತಿರುವರು. ಇಂತಹ ಗುತ್ತಿಗೆದಾರನಿಗೆ ನೀಡಿರುವ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯವರು ಹಿಂಪಡೆದು, ಈ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ ಅವರು, ಕಾಮಗಾರಿ ಕುರಿತು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಇಂದ್ರಾಣಿ ರವಿಕುಮಾರ್, ಲತಾಲೋಕೇಶ್, ಚಾಯಾ ರಮೇಶ್, ಗಣೇಶ್ ಇದ್ದರು.