ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾಪಂ ನಿವೇಶನದಲ್ಲಿ ಅಕ್ರಮ ಮಳಿಗೆ ನಿರ್ಮಾಣಕ್ಕೆ ಸಂಚು

Rashmi Kasaragodu
Updated On : 9 May 2014, 11:27 am

ಕನ್ನಡಪ್ರಭ ವಾರ್ತೆ, ಬೇಲೂರು, ಮೇ 9
ಪಟ್ಟಣದ ಹೊಳೇಬೀದಿಯಲ್ಲಿರುವ ತಾಲೂಕು ಪಂಚಾಯ್ತಿಗೆ ಸೇರಿದ ನಿವೇಶನದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಈಗಾಗಲೇ ನಿವೇಶನದ ಸ್ಥಳದಲ್ಲಿ ಕೆಲವೊಂದು ಕಾಮಗಾರಿ ಮಾಡಿಸಲಾಗಿದ್ದು, ನಿವೇಶನ ಸ್ಥಳದಲ್ಲಿದ್ದ ಹೆಚ್ಚುವರಿ ಮಣ್ಣನ್ನು ಹೊರತೆಗೆಯುವ ಕೆಲಸ ಮಾಡಲಾಗಿದೆ.  
ಸ್ಥಳ ಪರಿಶೀಲನೆ: ಅಕ್ರಮವಾಗಿ ನಡೆಸಲಾಗುತ್ತಿರುವ ಕಾಮಗಾರಿ ವಿಷಯ ತಿಳಿದ ಇಲ್ಲಿನ ತಾಲೂಕು ಪಂಚಾಯ್ತಿ  ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೇಶನದ ಸ್ಥಳವನ್ನು ಸ್ವಚ್ಛ ಮಾಡಲಾಗಿದೆ. ನಾವು ಸ್ಥಳಕ್ಕೆ ತೆರಳಿದ್ದಾಗ, ಯಾರೂ ಕೆಲಸ ಮಾಡುತ್ತಿರಲಿಲ್ಲ. ಈ ನಿವೇಶನದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಯದಂತೆ ನೋಡಿಕೊಳ್ಳಲು ತಾಲೂಕು ಪಂಚಾಯಿತಿ ನೌಕರರಿಗೆ ಸೂಚಿಸಲಾಗಿದೆ ಎಂದರು.  
ಪೊಲೀಸರಿಗೆ ದೂರು: ಹೊಳೆಬೀದಿಯಲ್ಲಿರುವ ಈ ನಿವೇಶನ ತಾಲೂಕು ಪಂಚಾಯಿತಿಗೆ ಸೇರಿದ್ದಾಗಿದ್ದು ಇದು ಹಾಲಿ ಡಾ. ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಂತಿದೆ. ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಗಳು ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ದೂರು ಬಂದಿದ್ದು ಅವರುಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸಭೆ: ಈ ನಿವೇಶನದಲ್ಲಿ ಯಾರಿಗೂ ವಾಣಿಜ್ಯ ಮಳಿಗೆ ಇನ್ನಿತರ ಯಾವುದೇ ರೀತಿಯ ಕಟ್ಟಡ ನಿರ್ಮಿಸುವುದಕ್ಕೆ ಅಥವಾ ನಿವೇಶನ ಬಾಡಿಗೆ ನೀಡುವುದಕ್ಕೆ ಅವಕಾಶ ಇರುವುದಿಲ್ಲ. ಡಾ. ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿದ ಟ್ರಸ್ಟ್ಗೆ ಶಾಸಕರು ಅಧ್ಯಕ್ಷರಾಗಿರುವುದರಿಂದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ಭೇಟಿ: ಇದೇ ವೇಳೆ ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಮಾಹಿತಿ ತಿಳಿದ ಪುರಸಭೆ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆಯಿಂದ ಈ ಸ್ಥಳದಲ್ಲಿ ಯಾವುದೇ  ಕಟ್ಟಡ, ಪೆಟ್ಟಿಗೆ ಅಂಗಡಿ, ಇನ್ನಿತರ ವ್ಯವಹಾರ ನಡೆಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರ ಒತ್ತಾಯ: ಈ ಅಕ್ರಮ ವ್ಯವಹಾರದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಟ್ರಸ್ಟಿನ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದ್ದು, ಒಂದೊಮ್ಮೆ ಈ ಅವ್ಯವಹಾರದಲ್ಲಿ ಟ್ರಸ್ಟಿನ ಸದಸ್ಯರು ಪಾಲ್ಗೊಂಡಿದ್ದರೆ ಅವರನ್ನು ಟ್ರಸ್ಟಿನಿಂದ ಹೊರ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ಮೋಹನ್, ಪುರಸಭೆಯ ರವಿನ್ಯೂ ಇನ್ಸ್ಪೆಕ್ಟರ್ ಬಸವರಾಜು ಶಿಗ್ಗಾವಿ, ಸೃತಿ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement