'ಪಾರ್ಕಿಂಗ್ ಶುಲ್ಕ ಟೆಂಡರ್ ಬೇಡ'
ಬೇಲೂರು: ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತ ಹೊಸದಾಗಿ ಪಾರ್ಕಿಂಗ್ ಶುಲ್ಕದ ಟೆಂಡರ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಹೊಸದಾಗಿ ಟೆಂಡರ್ ಬೇಡ: ಹೊಯ್ಸಳೇಶ್ವರ ದೇವಾಲಯದಸುತ್ತ ಇರುವ ರಸ್ತೆಯ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಾಗಿದ್ದು, ಇಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಆದರೆ ಈ ರಸ್ತೆಗೆ ಸೇರಿರುವ ಜಾಗದಲ್ಲಿ ಗ್ರಾಪಂ ವತಿಯಿಂದ ವಾಹನ ನಿಲುಗಡೆ ಶುಲ್ಕ ವಸೂಲು ಮಾಡಲು ಟೆಂಡರ್ ಮೂಲಕ ಪರವಾನಿಗೆ ಕೊಡಲಾಗಿದೆ. ಆದರೆ, 2014-2015ನೇ ಸಾಲಿಗೆ ಹೊಸ ಟೆಂಡರ್ ಕರೆಯಲು ತೀರ್ಮಾನಿಸಿರುವುದು ಸರಿಯಲ್ಲ ಎಂದು ಕರವೇ ಕಾರ್ಯಕರ್ತರು ವಿವರಿಸಿದರು.
ಸರಿಯಾದ ಕ್ರಮವಲ್ಲ: ಹೊಸ ಟೆಂಡರ್ಗೆ ಸಂಬಂಧಿಸದಿಂತೆ, ಲೋಕೋಪಯೋಗಿ ಇಲಾಖೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದಾಗಲೀ ಯಾವುದೇ ಪೂರ್ವಾನುಮತಿ ಪಡೆಯದೇ ಟೆಂಡರ್ ಕರೆಯಲು ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ದೂರಿದರು.
ಕ್ರಮ ಕೈಗೊಳ್ಳಬೇಕು: ಗ್ರಾಮ ಪಂಚಾಯ್ತಿಗೆ ಸೇರಿದ ಜಾಗದಲ್ಲಿ ದೇವಾಲಯಕ್ಕೆ ಬರುವ ಪ್ರವಾಸಿಗರ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ನಡೆಸುತ್ತಿದ್ದು, ಟೆಂಡರ್ ಪಡೆದಿರುವ ವ್ಯಕ್ತಿಗಳು ಮನಸ್ಸಿಗೆ ಬಂದಂತೆ ಪಾರ್ಕಿಂಗ್ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ. ಪ್ರವಾಸಿಗರ ಮೇಲೆ ದೌರ್ಜನ್ಯ ಹಾಗೂ ಕಿರಿಕಿರಿ ಮಾಡುತ್ತಿರುವವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಖಾದರ್, ಮಾಧ್ಯಮ ವಕ್ತಾರ ಸೀತಾರಾಮು, ನಗರ ಅಧ್ಯಕ್ಷ ಪ್ರಸನ್ನ, ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿಗೌಡ, ನಗರ ಉಪಾಧ್ಯಕ್ಷ ರೋಮಿಸಜ್ಜಾದ್ ಹಾಗೂ ಇತರರು ಇದ್ದರು.