ಬಡಾವಣೆ ಸ್ವಚ್ಛತೆಗೆ ಆಗ್ರಹಿಸಿ ಪ್ರತಿಭಟನೆ
ಹಾಸನ: ಸ್ವಚ್ಛತೆ ಹಾಗೂ ಬಡಾವಣೆಗೆ ಮೂಲಭೂತ ಸೌಕರ್ಯವನ್ನು 15 ದಿನಗಳ ಒಳಗೆ ಒದಗಿಸದಿದ್ದರೆ ನಗರಾಭಿವೃದ್ಧಿ ಪ್ರಾಧಿಕಾರ ಮುಂದೆ ಕಸ ಸುರಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ವಿಜಯ ನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದೇಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರ ವಲಯದಲ್ಲಿ ಇರುವ ವಿಜಯನಗರ ಬಡಾವಣೆ ಸ್ಥಾಪನೆಗೊಂಡು 25 ವರ್ಷ ಕಳೆದಿದೆ. ಈವರೆಗೂ ಈ ಬಡಾವಣೆಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಆಗ್ರಹ: ಈ ಬಡಾವಣೆಯ ಹಲವು ಕಡೆ ಕಸದ ರಾಶಿ ಬಿದ್ದಿದ್ದು, ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯ ರಸ್ತೆಗಳು ಸರಿಯಾಗಿ ಇಲ್ಲದೆ ಮಂಡಿ ಆಳದ ಗುಂಡಿ ಬಿದ್ದಿರುವುದರಿಂದ ಮಳೆ ಮತ್ತು ಚರಮಡಿ ನೀರು ರಸ್ತೆಯಲ್ಲಿ ಹರಿದಾಡುತ್ತಿವೆ. ಅರ್ಧ ಭಾಗ ಮಾತ್ರ ಚರಂಡಿಯಾಗಿದ್ದು, ಅದು ನಮ್ಮ ಹೋರಾಟದ ಫಲವಾಗಿದೆ. ಚರಂಡಿ ನೀರು ಆಗೇ ನಿಲ್ಲುತ್ತಿದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆರೋಗ್ಯಕ್ಕೆ ಹಾನಿಕರವಾಗುತ್ತಿದೆ. ತುರ್ತಾಗಿ ಚರಂಡಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮೊಬೈಲ್ ಟವರ್ಗಳ ಕಿರಿಕಿರಿ: ವಿದ್ಯುತ್ ಬಡಾವಣೆಯಲ್ಲಿ ವಾಸ ಮಾಡಲು ಹೆಚ್ಚಿನ ನವೇಶನ ನೀಡಿದ್ದು, ಖಾಸಗಿ ಕಂಪನಿಯವರು ಹಲವು ಕಡೆ ಮೊಬೈಲ್ ಟವರ್ ನಿರ್ಮಿಸಲಾಗಿದ್ದು, ಟ್ರಾನ್ಸ್ಫಾರ್ಮರ್ ಹಾಕಿಕೊಳ್ಳದೆ ವಿದ್ಯುತ್ ನೇರ ಲೈನ್ ಪಡೆಯಲಾಗಿದೆ. ಪ್ರತಿನಿತ್ಯ ವಿದ್ಯುತ್ ಟ್ರಿಪ್ ಆಗಿ ಜನತೆಗೆ ತೊಂದರೆ ಆಗುತ್ತಿದೆ. ಸಾರ್ವನಿಕರ ವಾಸ ನಿವೇಶನಗಳನ್ನು ಟವರ್ ಕಂಪನಿಗಳಿಗೆ ನೀಡಲು ಅನುಮತಿ ನೀಡಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪ್ರಾಧಿಕಾರ ನೀಡಬೇಕು. ಇಲ್ಲವಾದರೇ ತೊಂದರೆಯಾಗುತ್ತಿರುವ ಟವರ್ಗಳೆಲ್ಲವನ್ನೂ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದರು.
ಈ ಭಾಗದ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಉದ್ಯಾನವನದ ಅಭಿವೃದ್ಧಿ ಹಾಗೂ ಸೌಲಭ್ಯ ನೀಡಲು ಮುಂದಾಗಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚನ್ನೇಗೌಡ, ನಾರಾಯಣಗೌಡ, ಕಾರ್ಯದರ್ಶಿ ಅನುಗನಾಳ್ ಕೃಷ್ಣಮೂರ್ತಿ, ಖಜಾಂಚಿ ಬೆಟ್ಟಚಾರ್, ನಿರ್ದೇಶಕ ನಟರಾಜ್ ಇದ್ದರು.