ಬೇಲೂರು ತಾಲೂಕು ಕಸಾಪ ಸಂಭ್ರಮಾಚರಣೆ
ಬೇಲೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ವರ್ಷದ ಸಂಭ್ರಮಾಚರಣೆ ವೇಳೆ ಮಹಾರಾಜರಾದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇವರನ್ನು ಸ್ಮರಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಾ. ಕಸಾಪ ನಿಕಟಪೂರ್ವ ಅಧ್ಯಕ್ಷ ಟಿ.ಡಿ. ತಮ್ಮಣ್ಣಗೌಡ ಹೇಳಿದರು.
ತಾಲೂಕು ಕಸಾಪದಿಂದ ಕನ್ನಡ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಸಾಪ ಶತಮಾನೋತ್ಸವ ವರ್ಷ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಡೆಯರ್ ಕೊಡುಗೆ: 1915 ಮೇ 5ರಂದು ಆರಂಭಗೊಂಡ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ಆರಂಭದಲ್ಲಿ ಕಾಂತರಾಜಅರಸು ರು. 3 ಸಾವಿರ ಹಾಗೂ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರು. 5 ಸಾವಿರ ರು ದೇಣಿಗೆ ನೀಡಿ ಹುಟ್ಟುಹಾಕಿದರು ಎಂದು ಅವರು ಹೇಳಿದರು.
ಹೆಗಡೆ ದೇಣಿಗೆ: ಅಲ್ಲಿಂದಲೂ ತನ್ನದೇ ಸಂಪನ್ಮೂಲದಿಂದ ಕನ್ನಡ ಪರ ಸಾಹಿತ್ಯಕ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಷತ್ತಿಗೆ ವೆಂಕಟಸುಬ್ಬಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಪ್ರಥಮವಾಗಿ ರು. 50 ಸಾವಿರ ಅನುದಾನ ನೀಡಿ ಸಾಹಿತ್ಯಿಕ ಚಟುವಟಿಕೆ ಇಮ್ಮಡಿಗೊಳಿಸಿದರು. ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪರಿಷತ್ತು ಉತ್ತಮ ಸಾಹಿತ್ಯ ಸೇವೆ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ವಿಷಾದ: 1956ರಲ್ಲಿ ಭಾಷಾವಾರು ಪ್ರಾಂತ್ಯದ ಮೂಲಕ ಮೈಸೂರು ರಾಜ್ಯವು ಡಿ. ದೇವರಾಜಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಎಂದು ನಾಮಕರಣಗೊಂಡಿತು. ಆದರೆ ಇಂದು ಭಾಷಾವಾರು ಪ್ರಾಂತ್ಯದಲ್ಲಿ ಕನ್ನಡ ಭಾಷೆಗೆ ದುರ್ಗತಿ ಬರುತ್ತಿದೆ. ಇತ್ತೀಚೆಗೆ ುಪ್ರೀಂಕೋರ್ಟ್ ನೀಡಿರುವ ಕಡ್ಡಾಯ ಮಾಧ್ಯಮ ಕಡ್ಡಾಯವಲ್ಲ ಎಂಬ ತೀರ್ಪು ಕನ್ನಡ ಭಾಷೆ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ವಿಷಾದಿಸಿದರು.
ಪ್ರಥಮ ಕನ್ನಡ ಶಿಲಾ ಶಾಸನದ ಪ್ರತಿಕೃತಿ ಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷ ಅನಂತರಾಜೇಅರಸು, ಶಿಕ್ಷಕ ಕೆ.ಎನ್. ಚಂದ್ರಶೇಖರಪ್ಪ, ನಾಗರಾಜ್, ಉಪನ್ಯಾಸಕ ಮಹೇಶ್, ಬಿಆರ್ಸಿ. ಮಾ.ನ.ಮಂಜೇಗೌಡ, ಆಡಿಟರ್ ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.