ಹೆಚ್ಚಿದ 'ಹೇಮಾವತಿ' ಒಳ ಹರಿವು
ಹಾಸನ: ಎರಡು ದಿನಗಳಿಂದ ಮಳೆ ಸುರಿದ ಪರಿಣಾಮ ಹೇಮಾವತಿ ಜಲಾಶಯದ ಒಳ ಹರಿವಿನಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.
ಮೂಡಿಗೆರೆ ಮತ್ತು ಪಶ್ಚಿಮಘಟ್ಟದ ಪ್ರದೇಶದಲ್ಲಿ ಮಳೆ ಬಿರುಸುಗೊಂಡರೆ, ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಶುಕ್ರವಾರ ಜಲಾಶಯಕ್ಕೆ 475 ಕ್ಯುಸೆಕ್ಸ್ ಹರಿದು ಬರುತ್ತಿದೆ. ಗುರುವಾರ ಒಳ ಹರಿವಿನ ಪ್ರಮಾಣ 256 ಕ್ಯುಸೆಕ್ಸ್ ಇತ್ತು. ಈಗ ಜಲಾಶಯದಿಂದ ಕುಡಿಯುವ ನೀರಿಗೆ 75 ಕ್ಯುಸೆಕ್ಸ್ ಹೊರ ಬಿಡಲಾಗುತ್ತಿದೆ. ಇಂದಿನ ಜಲಾಶಯದ ಮಟ್ಟ 2866.70 ಅಡಿ. ಗರಿಷ್ಠ ಮಟ್ಟ 2922 ಅಡಿ.
ಹರ್ಷ ತಂದ ಭರಣಿ: ಜಿಲ್ಲೆಯಲ್ಲಿ ಭರಣಿ ಮಳೆ ತಂಪೆರೆದಿದೆ. 8 ತಾಲೂಕು ಗಳ ಬಹುತೇಕ ಹೋಬಳಿಗಳಲ್ಲಿ ಮಳೆಯಾಗಿದ್ದು ರೈತಾಪಿ ಸಮುದಾಯದಲ್ಲಿ ಹರ್ಷ ತಂದಿದೆ.
ಮೇ 9ರಂದು ಬೆಳಗಿನ ವರದಿಯಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ (ಮಿಲಿ ಮೀಟರ್ಗಳಲ್ಲಿ) ವರದಿ ಇಂತಿದೆ. ಅರಕಲಗೂಡು 40, ದೊಡ್ಡ ಮಗ್ಗೆ 38, ಕೊಣನೂರು 45, ಮಲ್ಲಿಪಟ್ಟಣ 56, ಅರಸೀಕೆರೆ 40, ಬಾಣಾವರ 42, ಗಂಡಸಿ 40, ಜಾವಗಲ್ 44, ಬೇಲೂರು 52, ಐರವಳ್ಳಿ 76, ಬಿಕ್ಕೋಡು 56, ಹಳೇಬೀಡು 44, ಮಾದಿಹಳ್ಳಿ 34, ಚನ್ನರಾಯಪಟ್ಟಣ 44, ಬಾಗೂರು 39, ದಂಡಿಗನಹಳ್ಳಿ 40, ಹಿರಿಸಾವೆ 41, ಶ್ರವಣಬೆಳಗೊಳ 44, ಹಾಸನ ನಗರ 41, ದುದ್ದ 38, ಕಟ್ಟಾಯ 39, ಸಾಲಗಾಮೆ 54, ಶಾಂತಿಗ್ರಾಮ 34, ಹೊಳೆನರಸೀಪುರ 4, ಹಳೇಕೋಟೆ 36, ಹಳ್ಳಿ ಮೈಸೂರು 52, ಸಕಲೇಶಪುರ 90, ಬೆಳಗೋಡು 51, ಹಾನುಬಾಳು 74, ಹೆತ್ತೂರು 44, ಯಸಳೂರು 63, ಆಲೂರು 46, ಕೆಂಚಮ್ಮನ ಹೊಸಕೋಟೆ 62, ಕುಂದೂರು 30, ಪಾಳ್ಯ 52 ಮಿ.ಮೀ. ಮಳೆಯಾಗಿದೆ.